ಇತ್ತೀಚೆಗೆ ಗಾಳಿಪಟ 2 ಸಿನಿಮಾದಲ್ಲಿ ಶಿಕ್ಷಕಿಯ ಪಾತ್ರ ನಿರ್ವಹಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದ ನಟಿ ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರ ವಹಿಸಿರುವ 'ಪೌಡರ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಕನ್ನಡದ ಈ ಬಹುನಿರೀಕ್ಷಿತ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಹೊಸ ಅವತಾರದಲ್ಲಿ ಸಿನಿಪ್ರಿಯರ ಮನಗೆಲ್ಲಲು ರೆಡಿಯಾಗಿದ್ದಾರೆ.
ಗುಲ್ಟು ಸಿನಿಮಾ ಖ್ಯಾತಿಯ ಜನಾರ್ಧನ ಚಿಕ್ಕಣ್ಣ ನಿರ್ದೇಶಿಸಿರುವ ಪೌಡರ್ ಚಿತ್ರದಲ್ಲಿ ದಿಗಂತ್ ಮಂಚಾಲೆ ಮತ್ತು ಧನ್ಯಾ ರಾಮ್ಕುಮಾರ್ ಮುಖ್ಯಭೂಮಿಕೆಯಲ್ಲಿದ್ದರೆ, ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ತಮ್ಮ ಪಾತ್ರಕ್ಕಾಗಿ ಶರ್ಮಿಳಾ ಹಾಕಿರುವ ಪರಿಶ್ರಮದ ಕುರಿತು ಅವರೇ ವಿವರಿಸಿದ್ದಾರೆ.
ಗ್ಲ್ಯಾಮರ್ ಪಾತ್ರಗಳಿಂದಲೇ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಮಾಂಡ್ರೆ ಅವರೀಗ ಅಳೆದೂ ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾ ಒಪ್ಪಿಕೊಳ್ಳಲು ಪ್ರಮುಖ ಕಾರಣ ನನ್ನ ಮೇಕಪ್ ಮಲ್ಲಿಕಾ ಪಾತ್ರ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರು ನನಗೆ ಈ ಪಾತ್ರ ಹೇಳುವ ಸಂದರ್ಭ ನಾಲ್ಕು ಪ್ರಮುಖ ಆ್ಯಕ್ಷನ್ ಸೀನ್ಗಳಿವೆ ಎಂದು ತಿಳಿಸಿದ್ದರು. ಆ್ಯಕ್ಷನ್ ಪಾತ್ರ ನಿರ್ವಹಿಸಬೇಕಿದೆ ಎಂದು ತಿಳಿಸಿದಾಗ ಈ ಪಾತ್ರ ಒಪ್ಪಿಕೊಂಡೆ ಎಂದು ತಿಳಿಸಿದರು.
ಇನ್ನು ಆ್ಯಕ್ಷನ್ ಸೀಕ್ವೆನ್ಸ್ ಪಾತ್ರಕ್ಕಾಗಿ ಸಹಜವಾಗಿ ಆರು ತಿಂಗಳ ಕಾಲ ಟ್ರೈನಿಂಗ್ ಇರುತ್ತದೆ. ಆದ್ರೆ ನಾನು ಎರಡು ತಿಂಗಳಲ್ಲಿ ಆ್ಯಕ್ಷನ್ ಕಲಿತುಕೊಂಡೆ. ನಮ್ಮ ಸಿನಿಮಾ ಸ್ಟಂಟ್ ಮಾಸ್ಟರ್ ಜೊತೆ ದಿನಕ್ಕೆ 2 ಗಂಟೆ ಪ್ರ್ಯಾಕ್ಟಿಸ್ ಮಾಡುತ್ತಿದ್ದೆ. ಅಷ್ಟೇ ಅಲ್ಲಾ, ಈ ಪಾತ್ರಕ್ಕೆ ಫಿಟ್ ಆಗಿರಬೇಕು. ಅದಕ್ಕೆ ನಾನು ಒಂದಿಷ್ಟು ಸಿದ್ಧತೆಯನ್ನೂ ಮಾಡಿಕೊಂಡಿದ್ದೆ. ಪ್ರತಿದಿನ ಬೆಳಗ್ಗೆ ಪ್ರ್ಯಾಕ್ಟಿಸ್ ಮಾಡುತ್ತಿದ್ದೆ. ಮಧ್ಯಾಹ್ನ ವರ್ಕ್ ಔಟ್ ಮಾಡುತ್ತಿದ್ದೆ. ಸಂಜೆ ಯೋಗ ಮಾಡುತ್ತಿದ್ದೆ. ಇವೆಲ್ಲವೂ ನನಗೆ ಸಹಾಯವಾಯಿತು. ಶೂಟಿಂಗ್ ಸಂದರ್ಭದಲ್ಲೂ ಈ ಶಾಟ್ ಸರಿಯಾಗಿ ಬರುತ್ತಿದೆಯಾ ಎಂದು ಡೈರೆಕ್ಟರ್, ಕ್ಯಾಮರಾಮ್ಯಾನ್ ಗುರುಮೂರ್ತಿ ಅದ್ವೈತ್ ಜೊತೆ ಮಾತುಕತೆ ನಡೆಸುತ್ತಿದ್ದೆ ಎಂದು ತಮ್ಮ ಶೂಟಿಂಗ್ ಕ್ಷಣಗಳನ್ನು ನೆನಪಿಸಿಕೊಂಡರು.
ರಂಗಾಯಣ ರಘು, ದಿಗಂತ್, ರವಿಶಂಕರ್ ಗೌಡ ಜೊತೆ ನಾನು ಈ ಹಿಂದೆ ಸಿನಿಮಾಗಲಲ್ಲಿ ನಟಿಸಿದ್ದೆ. ಪೌಡರ್ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಧನ್ಯಾ ಹಾಗೂ ನಾಗಭೂಷಣ್ ಜೊತೆ ಕೆಲಸ ಮಾಡಿದ್ದು, ಅನುಭವ ಚೆನ್ನಾಗಿತ್ತು. ಒಂದು ಸಿನಿಮಾ ಚೆನ್ನಾಗಿ ಮೂಡಿಬರಬೇಕಂದ್ರೆ ಇಡೀ ಟೀಮ್ನಲ್ಲಿ ಪಾಸಿಟಿವ್ ಎನರ್ಜಿ ಇರಬೇಕು. ಅದನ್ನು ಪೌಡರ್ ಸಿನಿಮಾ ಶೂಟಿಂಗ್ ಸೆಟ್ನಲ್ಲಿ ನೋಡಿದೆ. ಡೈರೆಕ್ಟರ್ ಕೂಡ ನಮ್ಮ ಜೊತೆ ತಮಾಷೆ ಮಾಡುತ್ತಲೇ ಶೂಟಿಂಗ್ ಮಾಡಿದ್ದಾರೆ ಎಂದು ತಿಳಿಸಿದರು.