ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಾಕ್ಚಾತುರ್ಯ ಮತ್ತು ಅವರ ಆಕರ್ಷಣೆ ಬಗ್ಗೆ ಬಾಲಿವುಡ್ ಸ್ಟಾರ್ ಹೀರೋ ರಣ್ಬೀರ್ ಕಪೂರ್ ಮಾತನಾಡಿ, ಪ್ರಧಾನಿಯನ್ನು ಹಾಡಿ ಹೊಗಳಿದ್ದಾರೆ. "ಪೀಪಲ್ ಬೈ ಡಬ್ಲ್ಯುಟಿಎಫ್" ಪಾಡ್‌ಕಾಸ್ಟ್‌ನಲ್ಲಿ ಝೆರೊದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ಮಾತನಾಡಿದ ಜನಪ್ರಿಯ ನಟ ಪ್ರಧಾನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯದ ಬಗ್ಗೆ ಹೆಚ್ಚು ಮಾತನಾಡಲಿಲ್ಲವಾದರೂ, 2019ರಲ್ಲಿ ಪ್ರಧಾನಿಯೊಂದಿಗಿನ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಪತ್ನಿ - ನಟಿ ಆಲಿಯಾ ಭಟ್, ಸಂಜು ಸಹ-ನಟ ವಿಕ್ಕಿ ಕೌಶಲ್ ಮತ್ತು ನಿರ್ಮಾಪಕ ಕರಣ್ ಜೋಹರ್ ಜೊತೆ ರಣ್ಬೀರ್ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದರು.
ನಾಲ್ಕೈದು ವರ್ಷಗಳ ಹಿಂದೆ ನಾನು ಇತರೆ ನಟರು ಮತ್ತು ನಿರ್ದೇಶಕರೊಂದಿಗೆ ನಮ್ಮ ಪ್ರಧಾನಿಯನ್ನು ಭೇಟಿಯಾಗಿದ್ದೆ. ನೀವು ಅವರನ್ನು ಟಿವಿಯಲ್ಲಿ ನೋಡುತ್ತೀರಿ, ಅವರು ಹೇಗೆ ಮಾತನಾಡುತ್ತಾರೆ ಎಂಬುದನ್ನು ನೀವು ನೋಡುತ್ತೀರ. ಅವರು ಮಹಾನ್ ವಾಗ್ಮಿ. ನಾವು ಮೊದಲ ಬಾರಿ ಅವರನ್ನು ಭೇಟಿಯಾಗಲು ಹೋದ ಕ್ಷಣ ನಮಗೆ ನೆನಪಿದೆ. ನಾವು ಕುಳಿತಿದ್ದೆವು. ಅವರು ಒಳಗೆ ಬಂದರು. ಅವರಲ್ಲಿ ಅದೊಂದು ಮ್ಯಾಗ್ನೆಟಿಕ್ ಚಾರ್ಮ್ ಇತ್ತು ಎಂದು ಶನಿವಾರ ಪ್ರಸಾರವಾದ ಪಾಡ್‌ಕಾಸ್ಟ್‌ನಲ್ಲಿ ಹೇಳಿದರು.
ರಣ್ಬೀರ್ ಕಪೂರ್ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸ್ಟಾರ್ ಡೆಲಿಗೇಶನ್ನ ಭಾಗವಾಗಿದ್ದರು. ರಣ್ವೀರ್ ಸಿಂಗ್, ಭೂಮಿ ಪೆಡ್ನೇಕರ್, ಆಯುಷ್ಮಾನ್ ಖುರಾನಾ, ಸಿದ್ಧಾರ್ಥ್ ಮಲ್ಹೋತ್ರಾ, ಏಕ್ತಾ ಕಪೂರ್, ರಾಜ್‌ಕುಮಾರ್ ರಾವ್, ವರುಣ್ ಧವನ್, ಅಶ್ವಿನಿ ಅಯ್ಯರ್ ತಿವಾರಿ ಮತ್ತು ರೋಹಿತ್ ಶೆಟ್ಟಿ ಸಹ ಜೊತೆಗಿದ್ದರು. ಈ ಸಭೆಯನ್ನು 'ಕರ್ಟಸಿ ಮೀಟಿಂಗ್' ಎಂದು ಉಲ್ಲೇಖಿಸಲಾಗಿತ್ತು. ಪ್ರಧಾನ ಮಂತ್ರಿಯೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಗ್ರೂಪ್ ಸೆಲ್ಫಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು..
ರಣ್ಬೀರ್ ಅವರ ತಂದೆ ರಿಷಿ ಕಪೂರ್ (ದಿ. ನಟ) ಅವರು ಆ ಸಂದರ್ಭ ಲ್ಯುಕೇಮಿಯಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಅಂದು ಪ್ರಧಾನಿ ನಮ್ಮ ನಿಯೋಗದ ಪ್ರತೀ ಸದಸ್ಯರೊಂದಿಗೆ "ವೈಯಕ್ತಿಕ" ವಿಷಯಗಳ ಬಗ್ಗೆಯೂ ಮಾತನಾಡಿದ್ದರು ಎಂದು ನಟ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.