ಬೆಂಗಳೂರು: ಪ್ರೀತಿಸುತ್ತಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದ ವಿವಾಹಿತ ಮಹಿಳೆಯೊಬ್ಬರು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ರಾಚೇನಹಳ್ಳಿಯಲ್ಲಿ ನಡೆದಿದೆ. ದಿಲ್ಶಾದ್ (23) ಆತ್ಮಹತ್ಯೆಗೆ ಶರಣಾದ ಮಹಿಳೆ.
ನಡೆದಿದ್ದೇನು? ವಿಜಯಪುರ ಮೂಲದ ದಿಲ್ಶಾದ್, ಆರು ವರ್ಷಗಳ ಹಿಂದೆ ಕೃಷ್ಣ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಇತ್ತೀಚಿಗೆ ಜಾನ್ಸನ್ ಎಂಬ ಯುವಕನನ್ನು ದಿಲ್ಶಾದ್ ಪ್ರೀತಿಸುತ್ತಿದ್ದರು. ಇಬ್ಬರ ನಡುವಿನ ಸಂಬಂಧ ವೈವಾಹಿಕ ಸಂಬಂಧ ಎನಿಸಿಕೊಳ್ಳುವುದಿಲ್ಲ ಎಂದು ಬೇಸತ್ತಿದ್ದ ಜಾನ್ಸನ್ ಶುಕ್ರವಾರ ಸಂಜೆ ಥಣಿಸಂದ್ರದಲ್ಲಿರುವ ತನ್ನ ಮನೆಯ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾನ್ಸನ್ ಸಾವಿನ ಸುದ್ದಿಯನ್ನು ಆತನ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದನ್ನ ನೋಡಿ ಆಘಾತಕ್ಕೊಳಗಾಗಿದ್ದ ದಿಲ್ಶಾದ್, ಜಾನ್ಸನ್‌ನ ಮನೆ ಬಳಿ ಹೋಗಿ ಮೃತದೇಹವನ್ನೂ ನೋಡಿಕೊಂಡು ವಾಪಸಾಗಿದ್ದರು. ಬಳಿಕ ಇಂದು ಬೆಳಗ್ಗೆ ತನ್ನ ಮನೆಯಲ್ಲಿಯೇ ದಿಲ್ಶಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ದಿಲ್ಶಾದ್ರ ಪತಿ ಕೃಷ್ಣ ಯಾವಾಗಲು ಪಾನಮತ್ತನಾಗಿ ಪತ್ನಿಯನ್ನ ಅನುಮಾನಿಸುತ್ತಿದ್ದ. ಜೊತೆಗೆ ಹಲ್ಲೆ ಮಾಡುತ್ತಿದ್ದ, ಇದೇ ಕಾರಣಕ್ಕೆ ದಿಲ್ಶಾದ್ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
"ಘಟನಾ ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಿಲ್ಶಾದ್ ತಾಯಿ ಬೇಗಂ ಎಂಬುವರು ನೀಡಿರುವ ದೂರಿನನ್ವಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ತನಿಖೆ ಕೈಗೊಳ್ಳಲಾಗಿದೆ" ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ವಿ. ಸಜೀತ್ ತಿಳಿಸಿದರು.
ಇದನ್ನೂ ಓದಿ: ಕಲಬುರಗಿ : ಡ್ರಗ್ ಸ್ಮಗ್ಲರ್ ಮೇಲೆ ಪೊಲೀಸರಿಂದ ಫೈರಿಂಗ್
ಇದನ್ನೂ ಓದಿ: ಮೈಸೂರು: ಚರಂಡಿಯಲ್ಲಿ ಸಿಕ್ಕ ಜೀವಂತ ನವಜಾತ ಶಿಶುವಿನ ತಾಯಿ ಪತ್ತೆ