ಕೋಟಾ (ರಾಜಸ್ಥಾನ) : ಈ ವರ್ಷ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪರೀಕ್ಷೆಯಲ್ಲಿ (ನೀಟ್ ಯುಜಿ) ಬದಲಾವಣೆ ಮಾಡಲಾಗಿದೆ. ಕೋವಿಡ್ಗೂ ಮೊದಲಿದ್ದ ಮಾದರಿಯನ್ನು ಈ ಬಾರಿ ಅನುಸರಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಎಟಿ) ನಿರ್ಧರಿಸಿದೆ. ನಾಲ್ಕು ವರ್ಷಗಳ ನಂತರ ಪರೀಕ್ಷೆ ಸ್ವರೂಪ ಬದಲಾಗುತ್ತಿದೆ.
ಏನೆಲ್ಲಾ ಬದಲಾವಣೆ?: ಪರೀಕ್ಷೆಗೆ ನೀಡಲಾಗುತ್ತಿದ್ದ 200 ನಿಮಿಷದ (3 ಗಂಟೆ 20 ನಿಮಿಷಗಳು) ಬದಲಿಗೆ ಈಗ 180 ನಿಮಿಷದ ಅವಧಿ ನೀಡಲಾಗುತ್ತದೆ. 20 ನಿಮಿಷಗಳ ಹೆಚ್ಚುವರಿ ಕಾಲಾವಧಿ ಇನ್ನು ಮುಂದೆ ಇರುವುದಿಲ್ಲ. 720 ಅಂಕಗಳಿಗೆ 180 ಪ್ರಶ್ನೆಗಳಿರಲಿವೆ. ಎಲ್ಲ ಪ್ರಶ್ನೆಗಳಿಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಉತ್ತರಿಸಬೇಕಾಗುತ್ತದೆ ಎಂದು ಎನ್ಟಿಎ ತಿಳಿಸಿದೆ.
ಕೋವಿಡ್ಗೂ ಮೊದಲು ಈ ಪರೀಕ್ಷಾ ಮಾದರಿ ಇತ್ತು. ಕೋವಿಡ್ ಬಳಿಕ 720 ಅಂಕಗಳಿಗೆ 200 ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇದರಲ್ಲಿ 20 ಪ್ರಶ್ನೆಗಳು ಆಯ್ಕೆಯಾಗಿದ್ದವು. ಈಗ, 20 ಹೆಚ್ಚುವರಿ ಪ್ರಶ್ನೆಗಳು ಇರುವುದಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ತಿಳಿಸಿದೆ.
ಪ್ರಶ್ನೆ ಪತ್ರಿಕೆ ವಿಂಗಡನೆ ಇರಲ್ಲ: ಪ್ರಶ್ನೆಪತ್ರಿಕೆಗಳನ್ನು ಎ ಮತ್ತು ಬಿ ಭಾಗ ಎಂದು ವಿಂಗಡಿಸಲಾಗುತ್ತಿತ್ತು. ಇದನ್ನೂ ಕೈಬಿಡಲಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಇರಲಿವೆ. ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಇನ್ನು ಮುಂದೆ ಪ್ರತ್ಯೇಕ ವಿಷಯಗಳಾಗಿರುವುದಿಲ್ಲ. ಅದನ್ನು ಜೀವಶಾಸ್ತ್ರದ ಅಡಿ ಕ್ರೋಢೀಕರಿಸಲಾಗಿದೆ.
ಹೀಗಿರಲಿದೆ ಹೊಸ ಪ್ರಶ್ನೆ ಪತ್ರಿಕೆ: ಹೊಸ ಪ್ರಶ್ನೆಪತ್ರಿಕೆ ಮಾದರಿಯ ಪ್ರಕಾರ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ತಲಾ 45 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಜೀವಶಾಸ್ತ್ರದಲ್ಲಿ 90 ಪ್ರಶ್ನೆಗಳಿರುತ್ತವೆ. ಪತ್ರಿಕೆಯು ಒಟ್ಟು 180 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಉತ್ತರಿಸಲು 180 ನಿಮಿಷ ಸಮಯಾವಕಾಶ ಇರಲಿದೆ. ಪ್ರತಿ ಪ್ರಶ್ನೆಗೂ ಉತ್ತರ ನೀಡುವುದು ಕಡ್ಡಾಯವಾಗಿರುತ್ತದೆ. 3 ಗಂಟೆಗಳ ಅವಧಿಗೆ ವಿದ್ಯಾರ್ಥಿಗಳು ಉತ್ತರಿಸಲು ಸಿದ್ಧರಾಗಬೇಕು. ಹೆಚ್ಚುವರಿ ನಿಮಿಷಗಳ ಅವಕಾಶ ಇರುವುದಿಲ್ಲ ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ಅವರು ತಿಳಿಸಿದ್ದಾರೆ.
ಕೋವಿಡ್ ಬಳಿಕ ಬದಲಾಗಿದ್ದ ಸ್ವರೂಪ: ಕೋವಿಡ್ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು(ಎನ್ಟಿಎ) ನೀಟ್ ಯುಜಿ ಪ್ರಶ್ನೆ ಪತ್ರಿಕೆಯಲ್ಲಿ 200 ಪ್ರಶ್ನೆಗಳನ್ನು ಕೇಳುತ್ತಿತ್ತು. ಇದು ಭಾಗ A ಮತ್ತು ಭಾಗ B ಎಂದು ವಗೀಕರಿಸಲಾಗಿತ್ತು. ಇದರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ವಿಷಯದಲ್ಲಿ ತಲಾ 50 ಪ್ರಶ್ನೆಗಳಿದ್ದವು. ಭಾಗ A ನಲ್ಲಿ ಕೇಳಲಾಗುತ್ತಿದ್ದ 35 ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಬೇಕಿತ್ತು. ಭಾಗ B ನಲ್ಲಿ 15 ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇದರಲ್ಲಿ 10 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಪ್ರತಿ ವಿಷಯಕ್ಕಿದ್ದ 50 ರಲ್ಲಿ 45 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು.
ಇದನ್ನೂ ಓದಿ: ನೀಟ್ ಯುಜಿಯಲ್ಲಿ ಕೇವಲ 135 ಅಂಕ ಪಡೆದಿದ್ದರೂ ಸಿಕ್ತು MBBS ಸೀಟ್: ಅದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ