'ಪುಷ್ಪ 2: ದಿ ರೂಲ್' ಚಿತ್ರದ ಯಶಸ್ಸಿನಲೆಯಲ್ಲಿರುವ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿದ್ದ ಸಂದರ್ಭ ಗಾಯಗೊಂಡಿದ್ದು, ಸಿಕಂದರ್ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಭಿನಯ ಮಾತ್ರವಲ್ಲದೇ ತಮ್ಮ ಫಿಟ್ನೆಸ್‌ಗೆ ಹೆಸರುವಾಸಿಯಾಗಿರುವ 28ರ ಹರೆಯದ ತಾರೆ ತಮ್ಮ ಜಿಮ್ ಟ್ರೇನಿಂಗ್ ಸೆಷನ್ ಸಂದರ್ಭ ಗಾಯಗೊಂಡಿದ್ದು, ಸಂಪೂರ್ಣವಾಗಿ ಗುಣಮುಖರಾಗಲು ಕೆಲ ಸಮಯದವರೆಗೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ.
ವರದಿಯೊಂದು ಬಹಿರಂಗಪಡಿಸಿದಂತೆ, ''ನಟನ ಆಪ್ತ ಮೂಲ ಮಾಹಿತಿ ನೀಡಿದೆ. ರಶ್ಮಿಕಾ ಇತ್ತೀಚೆಗೆ ಜಿಮ್‌ನಲ್ಲಿ ಗಾಯಗೊಂಡಿದ್ದಾರೆ. ವಿಶ್ರಾಂತಿ ಪಡೆಯುವ ಮೂಲಕ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಮುಂಬರುವ ಸಿನಿಮಾಗಳ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಹುತೇಕ ಗುಣಮುಖರಾಗಿದ್ದು, ಶೀಘ್ರದಲ್ಲೇ ಸೆಟ್‌ಗೆ ಮರಳಿ ಕೆಲಸ ಪುನರಾರಂಭಿಸುವ ನಿರೀಕ್ಷೆಯಿದೆ".
ನಟಿ ಗಾಯಗೊಂಡಿರೋದು ಎ.ಆರ್.ಮುರುಗದಾಸ್ ನಿರ್ದೇಶನದ ಸಿಕಂದರ್ ಶೂಟಿಂಗ್ ಶೆಡ್ಯೂಲ್ ಮೇಲೆ ಪರಿಣಾಮ ಬೀರಿದೆ. ಈ ಚಿತ್ರದಲ್ಲಿ ರಶ್ಮಿಕಾ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಜನವರಿ 10 ರಂದು ಮುಂಬೈನಲ್ಲಿ ಪ್ರಾರಂಭವಾಗಬೇಕಿದ್ದ ಚಿತ್ರದ ಕೊನೆಯ ಭಾಗದ ಚಿತ್ರೀಕರಣವೀಗ ವಿಳಂಬವಾಗಿದೆ. ಅದಾಗ್ಯೂ, ಇದೇ ಸಾಲಿನ ಈದ್ಗೆ ಬಿಡುಗಡೆ ಆಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿರೋ ಹಿನ್ನೆಲೆ, ಚಿತ್ರೀಕರಣವನ್ನು ಶೀಘ್ರವೇ ಪೂರ್ಣಗೊಳಿಸಬೇಕಿದೆ. ಅದೇ ಭರವಸೆಯಲ್ಲಿ ಚಿತ್ರತಂಡ ಸಾಗಿದೆ.
ಇದನ್ನೂ ಓದಿ: 'ಆ ವಧುವನ್ನು ಪ್ರಭಾಸ್ ವರಿಸಲಿದ್ದಾರೆ': ನಟ ರಾಮ್ ಚರಣ್ ಕೊಟ್ರು ಹಿಂಟ್
ಕಿರಿಕ್ ಪಾರ್ಟಿ ಬೆಡಗಿ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಪುಷ್ಪ 2: ದಿ ರೂಲ್' ಇನ್ನೂ ಸುದ್ದಿಯಲ್ಲಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರ ಬಾಹುಬಲಿ 2 ದಾಖಲೆಯನ್ನು ಹಿಂದಿಕ್ಕಿ ದಂಗಲ್ ನಂತರದ ಸ್ಥಾನ ಅಂದರೆ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರಮಂದಿರದಲ್ಲಿ ಪ್ರದರ್ಶನ ಮುಂದುವರಿದಿದ್ದು, ಪುಷ್ಪ 2: ದಿ ರೂಲ್ ರೀಲೋಡೆಡ್ ಅನ್ನು ನಿರ್ಮಾಪಕರು ಇತ್ತೀಚೆಗಷ್ಟೇ ಘೋಷಿಸಿದ್ದಾರೆ. ಈಗಾಗಲೇ ಇರುವ ಚಿತ್ರಕ್ಕೆ ಹೆಚ್ಚುವರಿಯಾಗಿ 20 ನಿಮಿಷಗಳ ಭಾಗ ಸೇರಿಸಲಾಗಿದ್ದು, ಹೊಸ ಆವೃತ್ತಿಯು ಇದೇ ಜನವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಸೂಪರ್ಸ್ಟಾರ್ಗಳೊಂದಿಗೆ ತೆರೆಹಂಚಿಕೊಂಡ ಟಿಕು ತಲ್ಸಾನಿಯಾಗೆ ಹೃದಯಾಘಾತ
ರಾಹುಲ್ ರವೀಂದ್ರನ್ ನಿರ್ದೇಶನದ 'ದಿ ಗರ್ಲ್‌ಫ್ರೆಂಡ್' ಮತ್ತು ಸಲ್ಮಾನ್ ಖಾನ್ ದ್ವಿಪಾತ್ರಗಳಲ್ಲಿ ನಟಿಸಿರುವ 'ಸಿಕಂದರ್', ರೈನ್ಬೋ, ಛಾವಾ ಸೇರಿದಂತೆ ಅನೇಕ ಪ್ರಾಜೆಕ್ಸ್ಗಳನ್ನು ಬಹುಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಹೊಂದಿದ್ದು, ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಮುಂದಿನ ಚಿತ್ರಗಳ ಅಪ್ಡೇಟ್ಸ್ ಕೊಡುವಂತೆ ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ.