ಬೆಂಗಳೂರು: ರಾಜ್ಯದ 14 ಇಲಾಖೆಗಳಿಗೆ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯಡಿ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಅನಾವಶ್ಯಕ ಮತ್ತು ದುರುದ್ದೇಶಪೂರಿತ ವಿವರಣೆ ಕೇಳಿ ಸಲ್ಲಿಸಿದ್ದ 9,646 ಅರ್ಜಿಗಳನ್ನು ವಜಾ ಮಾಡಿದ ರಾಜ್ಯ ಮಾಹಿತಿ ಆಯೋಗದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಅಲ್ಲದೆ, ಅರ್ಜಿದಾರರ ಈ ನಡೆಯಿಂದಾಗಿ ಆರ್‌ಟಿಐ ಕಾಯ್ದೆ ಸ್ಪಷ್ಟ ದುರುಪಯೋಗವಾಗುತ್ತಿದೆ. ಈ ರೀತಿಯ ಪ್ರವೃತ್ತಿ ಸದುದ್ದೇಶದಿಂದ ಮಾಹಿತಿ ಕೇಳುವವವರ ಅರ್ಜಿಗಳ ವಿಲೇವಾರಿಗೆ ವಿಳಂಬವಾಗುತ್ತಿದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
ಹುಬ್ಬಳ್ಳಿಯ ದಾವಲ್‌ಸಾಬ್ ಎಂ. ಮಿಯಾನ್ನವರ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಆರ್‌ಟಿಐ ಕಾಯ್ದೆಯ ನಿಯಮಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟ. ಯಾವುದೇ ನ್ಯಾಯಸಮ್ಮತ ಕಾರಣಗಳಿಲ್ಲದೆ ಸಾವಿರಾರು ಅರ್ಜಿಗಳನ್ನು ವಿವಿಧ ಇಲಾಖೆಗಳಲ್ಲಿ ಸಲ್ಲಿಸಿರುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದಿದೆ.
ಅಲ್ಲದೇ, ನ್ಯಾಯಾಲಯದ ಶುಲ್ಕವನ್ನು ಪಾವತಿ ಮಾಡದೆ ಅರ್ಜಿಗಳನ್ನು ಹಿಂಪಡೆಯುತ್ತೇನೆ ಎಂದು ತಿಳಿಸಿದ್ದು, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಅಪಾಯಕಾರಿ ನಡೆಯ ಪೂರ್ವ ನಿದರ್ಶನವಾಗುವುದರ ಜೊತೆಗೆ ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗಕ್ಕೆ ಸಹಕರಿಸಿದಂತಾಗಲಿದೆ. ಆದ್ದರಿಂದ ಅರ್ಜಿದಾರರಿಂದ ಬಾಕಿಯಿರುವ ಕೋರ್ಟ್ ಶುಲ್ಕ 9,64,600 ರೂ.ಗಳ ಪಾವತಿಗೆ ನ್ಯಾಯಾಲಯದ ರಿಜಿಸ್ಟ್ರಾರ್ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ.
ಜೊತೆಗೆ, ಈ ಪ್ರಕರಣ ಆರ್‌ಟಿಐ ಕಾಯ್ದೆಯ ದುರುಪಯೋಗವು ಸಾರ್ವಜನಿಕ ಆಡಳಿತದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರಬಲ್ಲದು ಎಂಬುದರ ಅತ್ಯುತ್ತಮ ಉದಾಹರಣೆಯಾಗಿದೆ. ಅರ್ಜಿದಾರರ ಇಂತಹ ನಡೆಗೆ ಅವಕಾಶ ನೀಡಿದರೆ ಇದು ಅಮೂಲ್ಯವಾದ ಸಾರ್ವಜನಿಕ ಸಂಪನ್ಮೂಲ ವ್ಯರ್ಥವಾಗುವುದರ ಜೊತೆಗೆ ಸದುದ್ದೇಶದಿಂದ ಮಾಹಿತಿ ಕೋರಿ ಆರ್ಜಿ ಸಲ್ಲಿಸುವ ನಾಗರಿಕರ ಅರ್ಜಿಗಳ ವಿಳಂಬ ವಿಲೇವಾರಿಗೆ ಕಾರಣವಾಗುತ್ತದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ : ಅರ್ಜಿದಾರರು ರಾಜ್ಯದ 14 ಇಲಾಖೆಗಳಿಂದ ವಿವಿಧ ಮಾಹಿತಿ ಕೇಳಿ ಸಲ್ಲಿಸಿದ 9,646 ಮನವಿಗಳಿಗೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನವಲಗುಂದದ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಅಲ್ಲಿಯೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ಅರ್ಜಿಗಳ ಸಂಖ್ಯೆಯನ್ನು ಗಮನಿಸಿದ ರಾಜ್ಯದ ಮುಖ್ಯ ಮಾಹಿತಿ ಆಯುಕ್ತರು ಪ್ರಕರಣದ ವಿಚಾರಣೆಗೆ ಪೂರ್ಣ ಪೀಠ ರಚಿಸಿದ್ದರು.
ಪೂರ್ಣ ಪೀಠವು, ಅರ್ಜಿದಾರರು ಆರ್‌ಟಿಐ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅನಗತ್ಯ ಮಾಹಿತಿಯನ್ನು ಕೇಳಿದ್ದಾರೆ. ಬೇಜವಾಬ್ದಾರಿಯುತ ಮನವಿಗಳನ್ನು ಸಲ್ಲಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 3,737 ಅರ್ಜಿಗಳು, ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ 964 ಅರ್ಜಿಗಳು, ತೋಟಗಾರಿಕೆ ಇಲಾಖೆಗೆ 492 ಅರ್ಜಿಗಳು ಸೇರಿದಂತೆ ಇನ್ನೂ ಹಲವು ಇಲಾಖೆಗಳಿಗೂ ಹತ್ತಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿದಾರರು ಸದುದ್ದೇಶವಿಲ್ಲದ ವರ್ತನೆ ತೋರಿದ್ದು ಇಂತಹ ಅರ್ಜಿಗಳಿಗೆ ಮಾನ್ಯತೆ ನೀಡಿದರೆ ಆಡಳಿತದ ದಕ್ಷತೆಗೆ ಧಕ್ಕೆ ತರಲಿದೆ ಮತ್ತು ಸಾರ್ವಜನಿಕ ಸಂಪನ್ಮೂಲಕ್ಕೆ ಹೊರೆ ಉಂಟು ಮಾಡಲಿದೆ ಎಂದು ಸುಪ್ರೀಂಕೋರ್ಟ್ನ ವಿವಿಧ ಆದೇಶಗಳನ್ನು ಉಲ್ಲೇಖಿಸಿ ಅರ್ಜಿಯನ್ನು ವಜಾ ಮಾಡಿ 2023ರ ಆಗಸ್ಟ್ನಲ್ಲಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ದವಲ್ ಸಾಬ್ ಎಂ ಮಿಯಾನ್ನಾವರ್ ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಶಿಕ್ಷಣಕ್ಕೆ ಧನಸಹಾಯ ಕೋರುವ ಕಾರ್ಮಿಕರಿಗೆ ನಿಯಮಗಳ ಪ್ರಕಾರ ಶೀಘ್ರ ಕ್ರಮಕ್ಕೆ ಹೈಕೋರ್ಟ್ ಸೂಚನೆ