ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯ 'ಗೇಮ್ ಚೇಂಜರ್' ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಮೊದಲ ದಿನವೇ ಜಾಗತಿಕವಾಗಿ 186 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡೋ ಮೂಲಕ ಯಶ ಕಂಡಿದೆ.
2022ರ ಮಾರ್ಚ್ನಲ್ಲಿ ತೆರೆಕಂಡ ಆರ್ಆರ್ಆರ್ ವಿಶ್ವಮಟ್ಟದಲ್ಲಿ ಸಖತ್ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಜೊತೆ ರಾಮ್ಚರಣ್ ತೆರೆ ಹಂಚಿಕೊಂಡಿದ್ದರು. ಸೋಲೋ ಹೀರೋ ಆಗಿ ಬಹಳ ವರ್ಷಗಳ ಬಳಿಕ ಬಂದ 'ಗೇಮ್ ಚೇಂಜರ್' ಪವರ್ಫುಲ್ ಅಂಕಿ - ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದೆ. ಇದು ಚಿತ್ರತಂಡ ಮತ್ತು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಗೇಮ್ ಚೇಂಜರ್ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಜನವರಿ 10 ರಂದು ಅದ್ಧೂರಿಯಾಗಿ ತೆರೆಕಂಡ ಗೇಮ್ ಚೇಂಜರ್ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 51.25 ಕೋಟಿ ರೂಪಾಯಿ ಸಂಪಾದಿಸಿದೆ. ಈ ಅಂಕಿಅಂಶಕ್ಕೆ ಹೆಚ್ಚಿನ ಕೊಡುಗೆ ತೆಲುಗು ಆವೃತ್ತಿಯಿಂದ ಸಿಕ್ಕಿದೆ. ತೆಲುಗಿನಲ್ಲಿ 42 ಕೋಟಿ ರೂಪಾಯಿ ಗಳಿಸಿದರೆ, ಹಿಂದಿ ಆವೃತ್ತಿಯಿಂದ 7 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಇನ್ನೂ, ಕನ್ನಡ ಮತ್ತು ಮಲಯಾಳಂ ಆವೃತ್ತಿಗಳಲ್ಲಿ ಕ್ರಮವಾಗಿ 0.1 ಕೋಟಿ ಮತ್ತು 0.05 ಕೋಟಿ ರೂ.ಗಳ ವ್ಯವಹಾರ ನಡೆದಿದೆ.
ಜಾಗತಿಕ ಕಲೆಕ್ಷನ್: ಗೇಮ್ ಚೇಂಜರ್ ಚಿತ್ರ ನಿರ್ಮಾಪಕರ ಪ್ರಕಾರ, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 186 ಕೋಟಿ ರೂ. ಸಂಪಾದಿಸಿದೆ. ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರದ ಪೋಸ್ಟರ್ ಹಂಚಿಕೊಂಡ ಪ್ರೊಡಕ್ಷನ್ ಹೌಸ್ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, "ಕಿಂಗ್ ಸೈಜ್ ಎಂಟರ್‌ಟೈನ್‌ಮೆಂಟ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 2025ರ ಮಾಸ್ ಎಂಟರ್‌ಟೈನರ್ ಗೇಮ್‌ಚೇಂಜರ್ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಓಪನಿಂಗ್ ಪಡೆದುಕೊಂಡಿದೆ. ಬ್ಲಾಕ್ ಬಸ್ಟರ್ ಗೇಮ್ ಚೇಂಜರ್ ತನ್ನ ಮೊದಲ ದಿನ ವಿಶ್ವಾದ್ಯಂತ 186 ಕೋಟಿ ರೂಪಾಯಿ ಗಳಿಸಿದೆ'' ಎಂದು ಬರೆದುಕೊಂಡಿದೆ.
ಇದನ್ನೂ ಓದಿ: 'ಆ ವಧುವನ್ನು ಪ್ರಭಾಸ್ ವರಿಸಲಿದ್ದಾರೆ': ನಟ ರಾಮ್ ಚರಣ್ ಕೊಟ್ರು ಹಿಂಟ್
ಗೇಮ್ ಚೇಂಜರ್ ಕುರಿತು... ಎಸ್.ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದಲ್ಲಿ ರಾಮ್ ಚರಣ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ರಾಮ್ಗೆ ಜೋಡಿಯಾಗಿದ್ದಾರೆ. ಎಸ್.ಜೆ ಸೂರ್ಯ, ನಾಸರ್, ಶ್ರೀಕಾಂತ್ ಮತ್ತು ಬ್ರಹ್ಮಾನಂದಂ ಸೇರಿದಂತೆ ಹಲವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭ್ರಷ್ಟಾಚಾರವನ್ನು ತೊಡೆದುಹಾಕುವ ಪಣತೊಟ್ಟ ಐಎಎಸ್ ಅಧಿಕಾರಿ ರಾಮ್ ನಂದನ್, ಎಸ್ ಜೆ ಸೂರ್ಯ ನಿರ್ವಹಿಸಿದ ರಾಜಕಾರಣಿ ಮೋಪಿದೇವಿ ಪಾತ್ರಗಳ ಸುತ್ತ ಸಿನಿಮಾ ಸುತ್ತುತ್ತದೆ.
ಇದನ್ನೂ ಓದಿ: ವಿಡಿಯೋ: ವೃಂದಾವನ ಆಶ್ರಮಕ್ಕೆ ಮಕ್ಕಳೊಂದಿಗೆ ಭೇಟಿ ಕೊಟ್ಟ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ
ಮೊದಲ ದಿನದ ಗಳಿಕೆಯಲ್ಲಿ, ಗೇಮ್ ಚೇಂಜರ್ ಸೋನು ಸೂದ್ ಅವರ ಫತೇಹ್ ಚಿತ್ರವನ್ನು ಹಿಂದಿಕ್ಕಿದೆ. ಈ ಸಿನಿಮಾ 2.45 ಕೋಟಿ ರೂಪಾಯಿ ಗಳಿಸಿದೆ. ರಾಮ್ ಚರಣ್ ಅವರ ಕೊನೆಯ ಹಿಟ್ ಸಿನಿಮಾ ಆರ್ಆರ್ಆರ್ ತನ್ನ ಮೊದಲ ದಿನ 133 ಕೋಟಿ ರೂಪಾಯಿ ಗಳಿಸಿತ್ತು.