ಬೆಂಗಳೂರು: ಶರಣಾಗಿರುವ ನಕ್ಸಲರಿಂದ ಶಸ್ತ್ರಾಸ್ತ್ರ ಪತ್ತೆಯಾಗಿರುವ ಮಾಹಿತಿ ಬಂದಿದೆ. ಎಕೆ 56, ರೈಫಲ್ಸ್, ಕಂಟ್ರಿಮೇಡ್ ಪಿಸ್ತೂಲ್ಗಳು ಸಿಕ್ಕಿವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ನಕ್ಸಲ್ ಶಸ್ತ್ರಾಸ್ತ್ರ ಪತ್ತೆ ವಿಚಾರವಾಗಿ ಇಂದು ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವರು, ಕೆಲವು ಶಸ್ತ್ರಾಸ್ತ್ರಗಳು ಸಿಕ್ಕಿವೆ ಅಂತ ಮಾಹಿತಿ ಬಂದಿದೆ. ಎಕೆ 56, ಕಂಟ್ರಿಮೇಡ್ ಪಿಸ್ತೂಲ್ ಎಲ್ಲ ಸಿಕ್ಕಿದೆ. ಇನ್ನೂ ಪತ್ತೆ ಕಾರ್ಯ ನಡೆಯುತ್ತಿದೆ ಎಂದರು.
ಜಿಎಸ್ಟಿ ಬಾಕಿ ತಾರತಮ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಜಿಎಸ್ಟಿ ಕಟ್ಟೋದ್ರಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ ಅಂತಾ ಮೊದಲಿನಿಂದಲೂ ಹೇಳುತ್ತಿದ್ದೇವೆ. ಅದಕ್ಕೆ ಪೂರಕವಾಗಿ ಅನುದಾನ ಕೊಡಿ ಅಂತಾ ಕೇಳಿದ್ದೆವು. ರಸ್ತೆಗಳಾಗಬೇಕು, ಅಭಿವೃದ್ಧಿಯಾಗಬೇಕು. ಜಿಎಸ್ಟಿ ಬಾಕಿ ಕೊಟ್ಟರೆ ತಾನೇ ಕೆಲಸ ಮಾಡೋದು. ಅವರು (ಕೇಂದ್ರ ಸರ್ಕಾರ) ಕೊಟ್ಟರೆ ಅಭಿವೃದ್ಧಿಯಾಗುತ್ತದೆ. ದೆಹಲಿ ಪ್ರತಿಭಟನೆ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಇದರ ಬಗ್ಗೆ ಯೋಚಿಸ್ತಿದ್ದಾರೆ. ನೋಡೋಣ ಏನು ಮಾಡ್ತಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಯಾವ ಮಾಹಿತಿಯೂ ನನ್ನ ಬಳಿ ಇಲ್ಲ. ದೆಹಲಿ ನಾಯಕರಿಂದಲೂ ಆ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಎರಡು ವರ್ಷ ಯಾಕೆ, ಡಿಕೆಶಿ ಐದು ವರ್ಷ ಸಿಎಂ ಆಗಲಿ ಎಂಬ ರಾಜಣ್ಣ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದು ಅವರ ಹೇಳಿಕೆ. ಅವರ ಹೇಳಿಕೆಗೆ ನಾನು ಯಾಕೆ ಪ್ರತಿಕ್ರಿಯೆ ನೀಡಲಿ. ನಾವು ಅದರ ಬಗ್ಗೆ ಯೋಚನೆ ಮಾಡಿಲ್ಲ ಎಂದು ತಿಳಿಸಿದರು.
ಹೈಕಮಾಂಡ್ಗೆ ತಿಳಿಸಿ ಸಭೆ : ಹೈಕಮಾಂಡ್ ನಾಯಕರಿಗೆ ತಿಳಿಸಿ ಸಭೆ ಮಾಡ್ತೇವೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ, ಗೌರವ ಕೊಡ್ತೀವಿ. ಹೈಕಮಾಂಡ್ ಹೇಳಿದ್ಮೇಲೆ ನಾವು ಕೇಳಬೇಕು. ಸುರ್ಜೇವಾಲ ಅವರು ರಾಜ್ಯಕ್ಕೆ ಬಂದ ಮೇಲೆ ಅವರ ಜೊತೆ ಮಾತನಾಡ್ತೇವೆ. ಯಾವ ಕಾರಣಕ್ಕೆ ಸಭೆ ಮಾಡ್ತಿದ್ವಿ ಅಂತ ದೂರವಾಣಿಯಲ್ಲೂ ನಾನು ಹೇಳಿದ್ದೇನೆ. ಅವರ ಗಮನಕ್ಕೆ ತಂದು ಸಭೆ ಮಾಡಬೇಕು ಎಂದು ಹೇಳಿದ್ದರು. ನಾವೆಲ್ಲ ಅದೇ ರೀತಿ ಮಾಡ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.
ಸಚಿವರ ಸಹಿ ಮಾರಾಟ ರೇಟ್ ಫಿಕ್ಸ್ ವಿಚಾರವಾಗಿ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ದಾಖಲೆ ಮತ್ತು ಮಾಹಿತಿ ಇದ್ದರೆ ಹೇಳಲಿ. ಗಾಳಿಯಲ್ಲಿ ಗುಂಡು ಹೊಡೆದ್ರೆ ಹೇಗೆ?. ಅವರ ಹೇಳಿಕೆಯಿಂದ ಡ್ಯಾಮೇಜ್ ಆಗಲ್ಲ. ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ದೂರು ನೀಡಿದ್ದರು. ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಅವರೇ ಗಂಭೀರವಾಗಿ ಆರೋಪ ಮಾಡಿದ್ದರು. ಆ ರೀತಿ ಹೇಳಿದ್ರೆ ಗಮನ ಹರಿಸಬಹುದು ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಪ್ರವೇಶಿಸಿದ ನಕ್ಸಲರು; ಕೊಟ್ಟ ಭರವಸೆ ಈಡೇರಿಸುವುದಾಗಿ ಸಿಎಂ ಅಭಯ