ಸ್ಯಾಂಡಲ್ವುಡ್ನಲ್ಲಿ ಕಮರ್ಷಿಯಲ್ ಸಿನಿಮಾಗಳ ನಡುವೆ ಆಗಾಗ್ಗೆ ಹೊಸ ಪ್ರತಿಭೆಗಳ ಆಲ್ಬಂ ಸಾಂಗ್ಸ್ ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಇದೀಗ ಅಧೀರ ಸಂತು ಅವರು ಬಾಲಿವುಡ್ ಸ್ಟೈಲ್ನಲ್ಲಿ ಕನ್ನಡದ ಆಲ್ಬಂ ಸಾಂಗ್ ಮಾಡಿದ್ದಾರೆ. ಸಖತ್ ಸ್ಟೈಲಿಶ್ ಆಗಿ ಮೂಡಿಬಂದಿರುವ 'ಓ ಏ ಲಡ್ಕಿ' ಸಾಂಗ್ಗೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಾಥ್ ಸಿಕ್ಕಿದೆ. ಕ್ಯಾಚಿ ಟೈಟಲ್ ಹೊಂದಿರೋ ಈ ಆಲ್ಬಂ ಸಾಂಗ್ ಅನ್ನು ಅನಾವರಣಗೊಳಿಸುವ ಮೂಲಕ ರಾಗಿಣಿ ನವಪ್ರತಿಭೆಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಅಮೃತ ಹಾಗೂ ಸಮೀರ್ ಅಭಿನಯಿಸಿರುವ 'ಓ ಏ ಲಡ್ಕಿ' ಆಲ್ಬಂ ಸಾಂಗ್ನಲ್ಲಿ ಉಗ್ರಂ ರವಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಎನ್ಆರ್ಐ ಯುವತಿಯಾಗಿ ಅಮೃತ, ಡೆಲಿವರಿ ಬಾಯ್ ಆಗಿ ಸಮೀರ್ ಅಭಿನಯಿಸಿದ್ದಾರೆ. ಈ ಹಾಡಿನ ಜೊತೆಗೆ ಇದರ ಲಿರಿಕಲ್ ವಿಡಿಯೋ ಹಾಗೂ ರಿಮಿಕ್ಸ್ ವರ್ಷನ್ ಅನ್ನೂ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ನಿರ್ದೇಶಕ ಅಧೀರ ಸಂತು ಅವರೇ ಈ ಹಾಡಿನ ಸಾಹಿತ್ಯ ರಚಿಸಿ, ಹಾಡಿದ್ದಾರೆ. ಆಕಾಶ್ ಆಡಿಯೋ ಮೂಲಕ ಓ ಏ ಲಡ್ಕಿ ಹಾಡು ಬಿಡುಗಡೆ ಆಗಿದೆ.
ಬಳಿಕ ಮಾತನಾಡಿದ ರಾಗಿಣಿ ದ್ವಿವೇದಿ, ಸಂತು ನನಗೆ ಬಹಳ ದಿನಗಳಿಂದ ಪರಿಚಯ. ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಂತು ಅವರ ವಿಷನ್ ತೆರೆಮೇಲೆ ಕಾಣುತ್ತಿದೆ. ಒಳ್ಳೊಳ್ಳೆ ಲೊಕೇಶನ್ಗಳಲ್ಲಿ ಹಾಡನ್ನು ಶೂಟ್ ಮಾಡಿದ್ದಾರೆ. ನನಗೂ ಅವರ ಜೊತೆ ಕೆಲಸ ಮಾಡಬೇಕೆಂಬ ಆಸಕ್ತಿಯಿದೆ ಎಂದು ಹೇಳಿದರು. ಈ ವಿಶೇಷ ಹಾಡಿನ ಕುರಿತು ಮಾತನಾಡಿದ ನಿರ್ಮಾಪಕ, ನಿರ್ದೇಶಕ ಅಧೀರ ಸಂತು, ನಾನು ಇಂಡಸ್ಟ್ರಿಗೆ ಹೊಸಬನೇನಲ್ಲ. ಉಪ್ಪಿ ಅವರ ಐವತ್ತನೇ ಚಿತ್ರವನ್ನು ನಾನೇ ಮಾಡಬೇಕಿತ್ತು. ಅವರು ಕಥೆ ಕೇಳಿ ಒಪ್ಪಿ ಡೇಟ್ಸ್ ಕೂಡ ಕೊಟ್ಟಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ಡ್ರಾಪ್ ಆಯ್ತು. ಸ್ನೇಹಿತರ ಸಹಕಾರದಿಂದ ಈ ಸಾಂಗ್ ನಿರ್ದೇಶನ ಮಾಡಿದ್ದೇನೆ. ನಟಿ ರಾಗಿಣಿ ಅವರನ್ನೇ ಇನ್ ಸ್ಪೈರ್ ಆಗಿ ತೆಗೆದುಕೊಂಡು ಮಾಡಿದ ಹಾಡಿದು. ಅವರು ಬ್ಯುಸಿ ಇದ್ದುದರಿಂದ ಬೇರೆಯವರ ಕೈಲಿ ಮಾಡಿಸಬೇಕಾಯ್ತು. ಮುಂದೆ ಅವರನ್ನು ಇಟ್ಟುಕೊಂಡು ಇಂಟರ್ನ್ಯಾಷನಲ್ ಲೆವೆಲ್ ಸಾಂಗ್ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.