ಫಸ್ಟ್ ಲುಕ್ ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ವಿಶಿಷ್ಟ ಶೀರ್ಷಿಕೆಯುಳ್ಳ 'ನೋಡಿದವರು ಏನಂತಾರೆ' ಚಿತ್ರ ಪ್ರೇಕ್ಷಕರಿಗೆ ಒಂದು ಹೊಸ ಅನುಭವ ನೀಡಲು ಸಜ್ಜಾಗಿದೆ. ಈ ಸಿನಿಮಾವನ್ನು ಕುಲದೀಪ್ ಕಾರಿಯಪ್ಪ ಅವರು ಬರೆದು ನಿರ್ದೇಶಿಸಿದ್ದು, ನಾಗೇಶ್ ಗೋಪಾಲ್ ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ಪ್ರತಿಭಾತ್ವಿತ ನಟ ನವೀನ್ ಶಂಕರ್ ಸಾಥ್ ಕೊಟ್ಟಿದ್ದಾರೆ. ಸಿನಿಮಾ ಶೀಘ್ರದಲ್ಲೇ ಪ್ರೇಕ್ಷಕರೆದುರು ಬರಲು ಸಜ್ಜಾಗುತ್ತಿದೆ.
'ನೋಡಿದವರು ಏನಂತಾರೆ' ಚಿತ್ರದಲ್ಲಿ ನವೀನ್ ಶಂಕರ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಪೂರ್ವ ಭಾರದ್ವಾಜ್ ನಾಯಕಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೊಯ್ಸಳ, ಕ್ಷೇತ್ರಪತಿ ಮತ್ತು ಸಲಾರ್ ಸಿನಿಮಾಗಳಲ್ಲಿ ರಗಡ್ ಹಾಗೂ ಇಂಟೆನ್ಸ್ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದ ನವೀನ್ ಶಂಕರ್ ಅವರು ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಲಿದ್ದಾರೆ. ನಿರ್ದೇಶಕರೇ ಹೇಳುವಂತೆ ನವೀನ್ ಶಂಕರ್ ಅವರ ಪಾತ್ರ ನಮ್ಮೆಲ್ಲರ ಒಳಗಿರುವ ಒಬ್ಬ ಮನುಷ್ಯನ ಕಥೆ ಹಾಗೂ ಭಾವನೆಗಳನ್ನು ಹೇಳುತ್ತದೆ. ಜೀವನದಲ್ಲಿ ನಮ್ಮ ಅಸ್ತ್ವಿತ್ವದ ಬಗ್ಗೆಯೇ ನಮಗೆ ಕಾಡುವ ಪ್ರಶ್ನೆಗಳು, ಪ್ರೀತಿ, ಆತ್ಮಾವಲೋಕನ ಹಾಗೂ ಬಾಂಧವ್ಯಗಳ ಸುತ್ತ ಈ ಸಿನಿಮಾ ಸಾಗುತ್ತದೆ.
ಶೀರ್ಷಿಕೆ ಸಿನಿಪ್ರಿಯರಿಗೆ ಸಿಗುವ ಮೊದಲ ಆಮಂತ್ರಣ. 'ನೋಡಿದವರು ಏನಂತಾರೆ' ತನ್ನ ಡಿಫ್ರೆಂಟ್ ಟೈಟಲ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ. ಕಥೆ ಕೂಡಾ ವಿಭಿನ್ನವಾಗಿರಲಿದೆ ಎಂಬ ನಂಬಿಕೆ ಪ್ರೆಕ್ಷಕರದ್ದು.