ಅಯೋಧ್ಯೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ ಜಾಗ್ವಾರ್ ಹಾಗೂ ಸೀತಾರಾಮ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬ್ರ್ಯಾಂಡ್ ಕ್ರಿಯೇಟ್ ಮಾಡಿಕೊಂಡ ನಟ ನಿಖಿಲ್ ಕುಮಾರಸ್ವಾಮಿ. ಸದ್ಯ ತಮಿಳು ಸಿನಿರಂಗದ ಪ್ರತಿಷ್ಠಿತ ಲೈಕಾ ಸಿನಿಮಾ ನಿರ್ಮಾಣ ಸಂಸ್ಥೆಯ ಜೊತೆ, ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
33ನೇ ವಸಂತಕ್ಕೆ ಕಾಲಿಟ್ಟಿರುವ ನಿಖಿಲ್ ಕುಮಾರಸ್ವಾಮಿ ಕಳೆದ ವರ್ಷ ಅಭಿಮಾನಿಗಳ ಜೊತೆ ಜೆ.ಪಿ ನಗರದ ನಿವಾಸದಲ್ಲಿ ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದರು. ಆದರೆ, ಈ ವರ್ಷ ನಿಖಿಲ್ ಕುಮಾರಸ್ವಾಮಿ ವಿಶೇಷವಾಗಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.
ಹೌದು, ಇಂದು ಭಾರತದಾದ್ಯಂತ ರಾಮ ಸ್ಮರಣೆ ಮಾಡುತ್ತಿದ್ದು, ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಶ್ರಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಹಾಗೂ ಕುಟುಂಬಕ್ಕೂ ಆಹ್ವಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿಖಿಲ್ ಕುಮಾರಸ್ವಾಮಿ ಅವರು, ತಂದೆ ಹೆಚ್.ಡಿ.ಕುಮಾರಸ್ವಾಮಿ ಹಾಗೂ ತಾತ ಹೆಚ್.ಡಿ.ದೇವೇಗೌಡ ಹಾಗೂ ಅಜ್ಜಿ ಚೆನ್ನಮ್ಮ ಅವರ ಜೊತೆಗೆ ಭಾನುವಾರವೇ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ತೆರಳಿದ್ದಾರೆ.
ಹಾಗಾಗಿ ಈ ಬಾರಿ ನಿಖಿಲ್ ಕುಮಾರಸ್ವಾಮಿ ಅವರು ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗಿಲ್ಲ. ಬದಲಾಗಿ ಇಂದು ಅಯೋಧ್ಯೆಯಲ್ಲಿ ತಂದೆ, ತಾತ ಹಾಗೂ ಅಜ್ಜಿ ಜೊತೆಗೆ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ತಾತ, ಅಜ್ಜಿ ಹಾಗೂ ತಂದೆಯ ಆಶೀರ್ವಾದ ಪಡೆದು, ಅವರುಗಳ ಕೈಯಲ್ಲೇ ಕೇಕ್ ಕಟ್ ಮಾಡಿಸುವ ಮೂಲಕ ತಮ್ಮ ಬರ್ತ್ ಡೇ ಆಚರಣೆ ಮಾಡಿಕೊಂಡಿದ್ದಾರೆ.
ಈ ವೇಳೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ, "ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಪುಣ್ಯಭೂಮಿ ಅಯೋಧ್ಯೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದು ನನ್ನ ಪುಣ್ಯ. ಈ ಸಂತೋಷದ ಗಳಿಗೆಯಲ್ಲಿ ತಂದೆಯವರಾದ ಕುಮಾರಸ್ವಾಮಿ ಹಾಗೂ ತಾತ ದೇವೇಗೌಡ ಮತ್ತು ಅಜ್ಜಿ ಚೆನ್ನಮ್ಮ ಜೊತೆಯಲ್ಲಿ ಇದ್ದದ್ದು ಮತ್ತಷ್ಟು ಸಂಭ್ರಮ ಹೆಚ್ಚಿಸಿದೆ" ಎಂದರು.
ಲೈಕಾ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯಸುತ್ತಿದ್ದು, ಚಿತ್ರಕ್ಕೆ ಲಕ್ಷ್ಮಣ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗಿದ್ದು, ನಾಯಕಿಯಾಗಿ ಯುಕ್ತಿ ತರೇಜಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಲೈಕಾ ಸಂಸ್ಥೆ ಮೊದಲ ಬಾರಿಗೆ ಕನ್ನಡ ಇಂಡಸ್ಟ್ರಿಯ ಸಿನಿಮಾದ ಮೇಲೆ ಬಂಡವಾಳ ಹೂಡುತ್ತಿದೆ.
ಇದನ್ನೂ ಓದಿ:ಹನುಮಾನ್ ಗಢಿ ದೇಗುಲದಲ್ಲಿ ನಟಿ ಕಂಗನಾ ರಣಾವತ್ ಸೇವಾ ಕಾರ್ಯ