ಮಲಯಾಳಂನಲ್ಲಿ ಮೊದಲು ಬಿಡುಗಡೆಯಾದ 'ದೃಶ್ಯಂ' ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿಯೂ ತೆರೆಕಂಡು ಯಶಸ್ವಿಯಾಗಿದೆ. ಈ ಚಿತ್ರ ಹಾಲಿವುಡ್ನಲ್ಲೂ ಮರುನಿರ್ಮಾಣವಾಗಲಿದೆ. ಮಲಯಾಳಂನಲ್ಲಿ ಮೊದಲು ತೆರೆಕಂಡಿದ್ದು ಸೂಪರ್ ಸ್ಟಾರ್ ಮೋಹನ್ಲಾಲ್ ಮುಖ್ಯಭೂಮಿಕೆಯಲ್ಲಿದ್ದರು. ಹಿಂದಿಯಲ್ಲೂ ಬಿಡುಗಡೆ ಆಗಿದ್ದು, ಅಜಯ್ ದೇವ್ಗನ್ ನಟಿಸಿದ್ದಾರೆ. ಕೆಲ ನೆಟ್ಟಿಗರು, ವರದಿಗಳು ಇದನ್ನು 'ಅಜಯ್ ದೇವ್ಗನ್ ಸಿನಿಮಾ' ಎಂದು ಉಲ್ಲೇಖಿಸಿದ ಹಿನ್ನೆಲೆ ಮೋಹನ್ಲಾಲ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.
ಅಜಯ್ ದೇವಗನ್ ಅವರ ಚಿತ್ರ ದೃಶ್ಯಂ ಹಾಲಿವುಡ್ನಲ್ಲಿ ರೀಮೇಕ್ ಆಗಲಿದೆ ಎಂದು ಉಲ್ಲೇಖಿಸಿರುವ ವರದಿಗಳಿಂದಾಗಿ ಮೋಹನ್ ಲಾಲ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಾಲಿವುಡ್ ರೀಮೇಕ್ ಘೋಷಣೆ ಹೊರಬಿದ್ದ ಬೆನ್ನಲ್ಲೇ, ಫ್ಯಾನ್ಸ್ ವಾರ್ ಶುರುವಾಗಿದೆ.
2013ರಲ್ಲಿ ಮೊದಲ ಬಾರಿ ಮಲಯಾಳಂನಲ್ಲಿ ದೃಶ್ಯಂ ಸಿನಿಮಾ ಬಂತು. ಮೋಹನ್ಲಾಲ್ ಮತ್ತು ಮೀನಾ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. 2015ರಲ್ಲಿ ಅಜಯ್ ದೇವ್ಗನ್ ಮತ್ತು ಟಬು ಮುಖ್ಯಭೂಮಿಕೆಯಲ್ಲಿ ಹಿಂದಿ ರಿಮೇಕ್ ತೆರೆಗಪ್ಪಳಿಸಿತ್ತು. ಹಿಂದಿ ದೃಶ್ಯಂ ಯಶ ಕಂಡು 2022ರಲ್ಲಿ ಸೀಕ್ವೆಲ್ ಬಂತು. ಈ ಚಿತ್ರ ಪ್ರಪಂಚದಾದ್ಯಂತ 356 ಕೋಟಿ ರೂ. ಕಲೆಕ್ಷನ್ ಮಾಡಿತ್ತು.