ಉಡುಪಿ: ಸಾಕುನಾಯಿಗೆ ಪಕ್ಕದ ಮನೆಯವರು ಆಹಾರದಲ್ಲಿ ವಿಷ ಬೆರೆಸಿ ಕೊಂದಿದ್ದಾರೆ ಎಂದು ಆರೋಪಿಸಿ ಶ್ವಾನದ ಮಾಲೀಕರು ದೂರು ನೀಡಿರುವ ಹಿನ್ನೆಲೆಯಲ್ಲಿ, ತನಿಖೆಗಾಗಿ ಹೂತಿದ್ದ ನಾಯಿಯ ಕಳೇಬರವನ್ನು ಪೊಲೀಸರು ಮೇಲಕ್ಕೆತ್ತಿದ್ದಾರೆ. ಜಿಲ್ಲೆಯ ಕಾಪು ಮಣಿಪುರದ ಬಡಗು ಮನೆ ಬಳಿ ಈ ಬೆಳವಣಿಗೆ ನಡೆಯಿತು.
ಸಾಮಾಜಿಕ ಕಾರ್ಯಕರ್ತೆ, ಪ್ರಾಣಿಪ್ರಿಯೆ ಬಿಂದು ಎಂಬವರು ನಾಯಿಯನ್ನು ಸಾಕಿದ್ದರು. ಫೆ.21ರಂದು ದಿಢೀರ್ ಮೃತಪಟ್ಟ ಸಾಕು ನಾಯಿಯನ್ನು ಮನೆಯವರು ಅಂತ್ಯಕ್ರಿಯೆ ನಡೆಸಿದ್ದರು. ತಮ್ಮ ಮನೆಯ ಸಮೀಪವೇ ಮೃತಪಟ್ಟಿದ್ದ ನಾಯಿಯನ್ನು ಸ್ಥಳೀಯ ವ್ಯಕ್ತಿಯೊಬ್ಬರ ನೆರವಿನೊಂದಿಗೆ ಹೂತಿದ್ದರು. ನಾಯಿಗೆ ವಿಷ ಬೆರೆಸಿ ಕೊಂದಿರುವ ಶಂಕೆ ಹಿನ್ನೆಲೆಯಲ್ಲಿ ಫೆ.21ರಂದೇ ಬಿಂದು ಅವರು ಕಾಪು ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆಗಾಗಿ ಹೂತಿದ್ದ ನಾಯಿಯ ಕಳೇಬರವನ್ನು ಹೊರತೆಗೆದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಶ್ವಾನದ ಒಡತಿ ಹೇಳುವುದೇನು?: ಈ ಬಗ್ಗೆ ಶ್ವಾನದ ಒಡತಿ ಬಿಂದು ಮಾತನಾಡಿ, ''ನಾವು ಬೆಳಗ್ಗೆ 6 ಗಂಟೆಗೆ ನಾವು ವಾಕಿಂಗ್ಗೆ ಹೋಗುತ್ತೇವೆ. ನಾವು ಮನೆಗೆ ಬಂದು ನೋಡುವಾಗ ನಾಯಿ ಇರಲಿಲ್ಲ. ಬಳಿಕ ನನಗೆ ನಾಯಿ ಸತ್ತಿರುವ ಬಗ್ಗೆ ತಿಳಿದು ಬಂತು. ನಾನು, ನನ್ನ ಅಮ್ಮ ನಾಯಿಯನ್ನು ಮಗುವಿನಂತೆ ಸಾಕಿದ್ದೇವೆ. ನನ್ನ ಅಮ್ಮ ಇನ್ನೂ ಕೂಡ ಅಳುತ್ತಿದ್ದಾರೆ. ಸ್ಥಳೀಯ ವ್ಯಕ್ತಿಯೊಬ್ಬರ ಸಹಾಯದಿಂದ ನಾಯಿಯನ್ನು ಹೂತೆವು. ದುಬೈಯಲ್ಲಿರುವ ನನ್ನ ಮಗಳಿಗೆ ಆ ನಾಯಿಯ ಮೇಲೆ ಬಹಳ ಪ್ರೀತಿ ಇತ್ತು. ಅವಳಿಗೆ ವಿಷಯ ಗೊತ್ತಾಗಿ, ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಪ್ರಾಣಿ ದಯಾ ಸಂಘದವರನ್ನು ಕರೆಯಿಸಲಾಗಿದೆ. ಪೊಲೀಸರು ಮತ್ತು ಪ್ರಾಣಿ ದಯಾ ಸಂಘದವರು ಮನೆಗೆ ಬಂದು, ನಾಯಿಯನ್ನು ಹೂತಲ್ಲಿಂದ ತೆಗೆದು ಈಗ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ'' ಎಂದರು.
ಎಸ್ಪಿ ಪ್ರತಿಕ್ರಿಯೆ: ''ದೂರು ಬಂದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ನಾಯಿಯ ಮೃತದೇಹವನ್ನು ಮೇಲೆತ್ತಿ, ರವಾನೆ ಬೈಲೂರಿನ ಪಶು ಚಿಕಿತ್ಸಾ ಕೇಂದ್ರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು'' ಎಂದು ಉಡುಪಿ ಎಸ್ಪಿ ಅರುಣ್ ಕುಮಾರ್ ಕೆ. 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಾಣಿ ದಯಾ ಸಂಘದ ಮಂಜುಳಾ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಸಲಾಯಿತು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಾಲಬಾಧೆ : ಮಂಡ್ಯದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ