ಮಾಲಾಶ್ರೀ ಮುಖ್ಯಭೂಮಿಕೆಯ 'ಮಾರಕಾಸ್ತ್ರ' ಚಿತ್ರ ಕಳೆದ ವರ್ಷ ತೆರೆಕಂಡು ಕನ್ನಡಿಗರ ಮನ ಗೆದ್ದಿತ್ತು. ಇದೀಗ ಇದೇ ಚಿತ್ರ ತೆಲುಗಿನಲ್ಲೂ ನಿರ್ಮಾಣ ಆಗಿದ್ದು, 'ಮಾರಣಾಯುಧಂ' ಎಂದು ಶೀರ್ಷಿಕೆ ಇಡಲಾಗಿದೆ. ತೆಲುಗು ರಾಜ್ಯಗಳಾದ ಆಂಧ್ರ ಹಾಗೂ ತೆಲಂಗಾಣದಲ್ಲಿ ಈ ಚಿತ್ರ ಈಗಾಗಲೇ ಬಿಡುಗಡೆ ಆಗಿದ್ದು, ಅಲ್ಲಿನ ಜನರ ಮನ ಗೆದ್ದಿದೆ. ಏಪ್ರಿಲ್ 26ರಂದು ಕರ್ನಾಟಕದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ರೀ ರಿಲೀಸ್ ಆಗುತ್ತಿದೆ. ಈ ಕುರಿತು ನಿರ್ಮಾಪಕರಾದ ಕೋಮಲ ನಟರಾಜ್ ಹಾಗೂ ನಿರ್ದೇಶಕ ಗುರುಮೂರ್ತಿ ಸುನಾಮಿ ಸೇರಿದಂತೆ ಚಿತ್ರತಂಡ ಕೆಲ ಮಾಹಿತಿ ಹಂಚಿಕೊಂಡಿದೆ.
ಚಿತ್ರದ ನಿರ್ದೇಶಕ ಗುರುಮೂರ್ತಿ ಸುನಾಮಿ ಮಾತನಾಡಿ, ಈ ಚಿತ್ರವನ್ನು ಬಿಡುಗಡೆ ಮಾಡಿದಾಗ ಚಿತ್ರದ ಅವಧಿ ಸ್ವಲ್ಪ ಹೆಚ್ಚಿದೆ ಎಂದಿದ್ದರು. ಈಗ 26 ನಿಮಿಷ ಕಡಿಮೆ ಮಾಡಿದ್ದೇವೆ. ಮಾಲಾಶ್ರೀ, ಆನಂದ್ ಆರ್ಯ, ಹರ್ಷಿಕಾ ಪೂಣಚ್ಚ ಸೇರಿದಂತೆ ಮೊದಲಾದವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಕಂಟೆಂಟ್ನಿಂದಾಗಿ ತೆಲುಗಿನಲ್ಲೂ ಡಬ್ಬಿಂಗ್ ಆಗಿ ಅಲ್ಲಿ ಬಿಡುಗಡೆ ಆಗಿದೆ ಎಂದರು.
ನಿರ್ಮಾಪಕರಾದ ಕೋಮಲ ನಟರಾಜ್ ಮಾತನಾಡಿ, ನಮ್ಮ ಮಾರಕಾಸ್ತ್ರ ಚಿತ್ರವನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದೆವು. ಆ ಸಮಯದಲ್ಲಿ ಭಾರತ-ಪಾಕ್ ಮ್ಯಾಚ್, ಹಬ್ಬಗಳು ಬಂದವು. ಹಾಗಾಗಿ ಹೆಚ್ಚಿನ ವೀಕ್ಷಕರಿಗೆ ನಮ್ಮ ಸಿನಿಮಾ ನೋಡಲು ಆಗಲಿಲ್ಲ. ಆದರೆ ಚಿತ್ರ ನೋಡಿದ ತೆಲುಗು ವಿತರಕರಾದ ವೆಂಕಟೇಶ್ ರಾವ್ ಅವರು ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಾಣ ಮಾಡಿ ಎಂದರು. ಮಾರಕಾಸ್ತ್ರ ಈಗ ಮಾರಣಾಯುಧಂ ಎಂಬ ಹೆಸರಿನಿಂದ ಇದೇ ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ. ಇದೇ ಶನಿವಾರ 27ರಂದು ಪೌರ ಕಾರ್ಮಿಕರು ಸೇರಿದಂತೆ ಅನೇಕ ಶ್ರಮಿಕ ವರ್ಗದವರಿಗೆ ಒಂದು ಉಚಿತ ಪ್ರದರ್ಶನದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.