ಮುಂಬೈ: ಮಹಾರಾಷ್ಟ್ರದ ನೂತನ ಮಹಾಯುತಿ ಸರ್ಕಾರದ ಸಚಿವರಿಗೆ ಕೊನೆಗೂ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಗೃಹ, ಕಾನೂನು ಮತ್ತು ನ್ಯಾಯಾಂಗ ಖಾತೆಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ನಗರಾಭಿವೃದ್ಧಿ, ವಸತಿ ಮತ್ತು ಲೋಕೋಪಯೋಗಿ ಖಾತೆಗಳನ್ನು ನೀಡಲಾಗಿದೆ.
ಎನ್ಸಿಪಿ ನಾಯಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಮತ್ತು ಯೋಜನೆ ಮತ್ತು ಅಬಕಾರಿ ಖಾತೆಗಳನ್ನು ನೀಡಲಾಗಿದೆ. ಸಂಪುಟ ವಿಸ್ತರಣೆಯ ಸುಮಾರು ಒಂದು ವಾರದ ನಂತರ ಈಗ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಒಟ್ಟಾರೆಯಾಗಿ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ಒಂದು ತಿಂಗಳ ನಂತರ ಅಳೆದು ತೂಗಿ ಖಾತೆಗಳನ್ನು ಘೋಷಣೆ ಮಾಡಲಾಗಿದೆ.
ಫಡ್ನವೀಸ್ ಇಂಧನ (ನವೀಕರಿಸಬಹುದಾದ ಇಂಧನವನ್ನು ಹೊರತುಪಡಿಸಿ), ಸಾಮಾನ್ಯ ಆಡಳಿತ ಮತ್ತು ಮಾಹಿತಿ ಮತ್ತು ಪ್ರಚಾರ ಖಾತೆ ಹಾಗೂ ಇನ್ನೂ ಹಂಚಿಕೆಯಾಗದ ಖಾತೆಗಳನ್ನು ತನ್ನ ಬಳಿ ಉಳಿಸಿಕೊಂಡಿದ್ದಾರೆ.
ಪಂಕಜಾ ಮುಂಡೆ ಅವರಿಗೆ ಪರಿಸರ, ಹವಾಮಾನ ಬದಲಾವಣೆ ಮತ್ತು ಪಶುಸಂಗೋಪನೆ ಖಾತೆಗಳನ್ನು ನೀಡಲಾಗಿದೆ. ಚಂದ್ರಶೇಖರ್ ಪ್ರಭಾವತಿ ಕೃಷ್ಣರಾವ್ ಬವಾನ್ಕುಲೆ ಅವರಿಗೆ ಕಂದಾಯ, ಹಸನ್ ಸಕೀನಾ ಮಿಯಾಲಾಲ್ ಮುಶ್ರಿಫ್ ಅವರಿಗೆ ವೈದ್ಯಕೀಯ ಶಿಕ್ಷಣ, ಚಂದ್ರಕಾಂತ್ ಸರಸ್ವತಿ ಬಚ್ಚು ಪಾಟೀಲ್ ಅವರಿಗೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಸಂಸದೀಯ ವ್ಯವಹಾರ, ಗಿರೀಶ್ ಗೀತಾ ದತ್ತಾತ್ರೇಯ ಮಹಾಜನ್ ಅವರಿಗೆ ಜಲಸಂಪನ್ಮೂಲ (ವಿದರ್ಭ, ತಾಪಿ, ಕೊಂಕಣ ಅಭಿವೃದ್ಧಿ ನಿಗಮ), ವಿಪತ್ತು ನಿರ್ವಹಣೆ, ದಾದಾಜಿ ರೇಷ್ಮಾಬಾಯಿ ದಗಡೂಜಿ ಭೂಸೆ ಅವರಿಗೆ ಶಾಲಾ ಶಿಕ್ಷಣ, ಅದಿತಿ ವರದಾ ಸುನಿಲ್ ತಟ್ಕರೆ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ ರಾವ್ ಸರಸ್ವತಿ ಶಿವಾಜಿ ಕೊಕಾಟೆ ಅವರಿಗೆ ಕೃಷಿ ಖಾತೆ ನೀಡಲಾಗಿದೆ.
ಮುಖ್ಯಮಂತ್ರಿಯಾಗಿ ಫಡ್ನವೀಸ್ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳು ಡಿಸೆಂಬರ್ 5ರಂದು ಪ್ರಮಾಣವಚನ ಸ್ವೀಕರಿಸಿದ್ದರು. ನಂತರ ಡಿಸೆಂಬರ್ 15ರಂದು ಮಹಾರಾಷ್ಟ್ರ ಸಚಿವ ಸಂಪುಟವನ್ನು ವಿಸ್ತರಿಸಲಾಗಿದ್ದು, 39 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರ ಸಂಪುಟದಲ್ಲಿ ಮುಖ್ಯಮಂತ್ರಿ ಮತ್ತು 6 ರಾಜ್ಯ ಖಾತೆ ಸಚಿವರು ಸೇರಿದಂತೆ 36 ಕ್ಯಾಬಿನೆಟ್ ಮಂತ್ರಿಗಳಿರುತ್ತಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ: 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಹಾಯುತಿ ಮೈತ್ರಿಕೂಟವು 235 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದೆ. 132 ಸ್ಥಾನಗಳೊಂದಿಗೆ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ : ಸಂಭಾಲ್ನ ಚಂದೌಸಿ ಪ್ರದೇಶದಲ್ಲಿ ಮುಚ್ಚಲ್ಪಟ್ಟಿದ್ದ ನೂರಾರು ವರ್ಷ ಹಳೆಯ ಮೆಟ್ಟಿಲು ಬಾವಿ ಪತ್ತೆ - STEPWELL DISCOVERED