ಬಾಗಲಕೋಟೆ: ಇಲ್ಲಿನ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ 13ನೇ ತೋಟಗಾರಿಕಾ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಜ್ಯೋತಿ ಬೆಳಗಿಸುವ ಮೂಲಕ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, "ಸವದತ್ತಿ ಯಲ್ಲಮ್ಮನ ಜಾತ್ರೆಗೆ ರೈತರು ಎತ್ತಿನ ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಹೋಗುತ್ತಾರೆ. ಆದರೆ ರೈತರಿಗಾಗಿ ಮಾಡಿರುವ ತೋಟಗಾರಿಕಾ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ.ಮೇಟಿ ಮಾತನಾಡಿ, ರಾಸಾಯನಿಕಮುಕ್ತ ಬೆಳೆ ಬೆಳೆಯುವಂತೆ ರೈತರಿಗೆ ಕರೆ ನೀಡಿದರು.

ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ವಿ.ವಿ.ಯ ಕುಲಪತಿ ಡಾ.ವಿಷ್ಣುವರ್ಧನ್ ಸೇರಿದಂತೆ ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧಕ ರೈತರಿಗೆ ಶ್ರೇಷ್ಠ ತೋಟಗಾರಿಕೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆ: ತೋಟಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಿರುವ ಫಲಪುಷ್ಪ ಮೇಳ ಜನರ ಗಮನ ಸೆಳೆಯುತ್ತಿದೆ. ಐಹೊಳೆಯ ಐತಿಹಾಸಿಕ ದುರ್ಗಾ ದೇವಾಲಯವನ್ನು ಪುಷ್ಪದಿಂದ ನಿರ್ಮಿಸಲಾಗಿದೆ. ಕೆಂಪು ಮೆಣಸಿನಕಾಯಿಯಿಂದ ತಯಾರಿಸಿದ ಗರುಡ ವಿಶೇಷವಾಗಿದೆ. ಇದರ ಜೊತೆಗೆ ಸಿರಿಧಾನ್ಯಗಳಿಂದ ಗೋವು ರಚನೆ ಮಾಡಲಾಗಿದೆ. ಶಿವನ ಮೂರ್ತಿಯಿಂದ ನೀರು ಬೀಳುವುದನ್ನು ಪುಷ್ಪಗಳಿಂದಲೇ ಅಲಂಕಾರ ಮಾಡಲಾಗಿದೆ.

ನಿನ್ನೆ ಮೇಳದ ಉದ್ಘಾಟನೆ ಸಮಾರಂಭ 11 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಸಚಿವರ ಆಗಮನ ವಿಳಂಬವಾಗಿ ಮಧ್ಯಾಹ್ನ 3 ಗಂಟೆಗೆ ವೇದಿಕೆ ಕಾರ್ಯಕ್ರಮ ಶುರುವಾಯಿತು. ಇದಕ್ಕೆ ಮೊದಲೇ ಬಂದಿದ್ದ ರೈತರು ಅಸಮಾಧಾನ ವ್ಯಕ್ತಪಡಿಸಿದರು. ತೋಟಗಾರಿಕಾ ಮೇಳಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಪ್ರತಿನಿಧಿಗಳ ಅಸಮಾಧಾನಕ್ಕೂ ಕಾರಣವಾಯಿತು.
ಇದನ್ನೂ ಓದಿ: ಅರಮನೆ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಚಾಲನೆ