ಹೆಚ್ಚು ವಿವಾದಕ್ಕೊಳಗಾದ ಘಟನೆಗಳು ಸಿನಿಮಾ ಟೈಟಲ್ ಆಗೋದು ಹೊಸತೇನಲ್ಲ. ಇದೀಗ 'ಪೆನ್ ಡ್ರೈವ್' ಶೀರ್ಷಿಕೆಯಡಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾವೊಂದು ನಿರ್ಮಾಣ ಆಗುತ್ತಿದೆ. ಈ ಚಿತ್ರದಲ್ಲಿ ಸ್ಯಾಂಡಲ್ವುಡ್ನ ಕನಸಿನ ರಾಣಿ ಮಾಲಾಶ್ರೀ, ಬಿಗ್ ಬಾಸ್ ಜನಪ್ರಿಯತೆಯ ತನಿಷಾ ಕುಪ್ಪಂಡ ಕಾಣಿಸಿಕೊಳ್ಳಲಿದ್ದಾರೆ.
ಸೆಬಾಸ್ಟಿನ್ ಡೇವಿಡ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಪೆನ್ ಡ್ರೈವ್' ಚಿತ್ರದ ಮುಹೂರ್ತ ಇತ್ತೀಚೆಗೆ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಕೃಷ್ಣೇಗೌಡ ಆರಂಭಿಕ ಫಲಕ ತೋರಿದರು. ಹಿರಿಯ ವಕೀಲ ರೇವಣ್ಣ ಸಿದ್ದಯ್ಯ ಕ್ಯಾಮರಾ ಚಾಲನೆ ಮಾಡಿದರು.
ರಾಜ್ಯದಲ್ಲಿ ನಡೆದ ಪೆನ್ ಡ್ರೈವ್ ಪ್ರಕರಣಕ್ಕೂ ಈ ಪೆನ್ ಡ್ರೈವ್ಗೂ ಯಾವುದೇ ಸಂಬಂಧವಿಲ್ಲ. ಕಥೆಗೆ ತಕ್ಕಂತೆ ಪೆನ್ ಡ್ರೈವ್ ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಾಮುಂಡಿ, ದುರ್ಗಿ ಮುಂತಾದ ಆ್ಯಕ್ಷನ್ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಆ್ಯಕ್ಷನ್ ಕ್ವೀನ್ ಎಂದು ಜನಪ್ರಿಯರಾಗಿರುವ ಮಾಲಾಶ್ರೀ ಹಾಗೂ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಬೆಂಕಿ ಅಂತಲೇ ಜನಪ್ರಿಯರಾದ ತನಿಷಾ ಕುಪ್ಪಂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸೆಬಾಸ್ಟಿನ್ ಡೇವಿಡ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಹದಿನೈದು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಅನುಭವ ಇವರಿಗಿದೆ. ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮಾಲಾಶ್ರೀ, ತನಿಷಾ ಕುಪ್ಪಂಡ ಅಲ್ಲದೇ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.