ಹೈದರಾಬಾದ್: ಬಾಲಿವುಡ್ ಚಿತ್ರರಂಗದಲ್ಲಿ ಇಂದು ಬೆಳಗ್ಗೆ ಆಘಾತಕಾರಿ ಸುದ್ದಿಯೊಂದು ದಿಢೀರ್ ಹೊರಬಿತ್ತು. ಅಷ್ಟಕ್ಕೂ ಖ್ಯಾತ ನಟಿಯ ತಂದೆಯ ಸಾವಿನ ವಿಚಾರ ಅವರ ಕುಟುಂಬಸ್ಥರಿಗಷ್ಟೇ ಅಲ್ಲದೇ, ಬಂಧು ಬಳಗ, ಆಪ್ತರಿಗೆ ಆಘಾತವನ್ನುಂಟು ಮಾಡಿದೆ. ತನ್ನ ಮಲತಂದೆಯ ಈ ಅನುಮಾನಾಸ್ಪದ ಸಾವಿನ ವಿಷ್ಯ ತಿಳಿದು ಪುಣೆಯಲ್ಲಿದ್ದ ನಟಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.
ನಟಿ, ರೂಪದರ್ಶಿ ನಟಿ ಮಲೈಕಾ ಅರೋರಾ ಅವರ ಮಲತಂದೆ ಅನಿಲ್ ಕುಲದೀಪ್ ಮೆಹ್ತಾ ಬುಧವಾರ ಬೆಳಗ್ಗೆ ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ. ಪುಣೆಯಲ್ಲಿದ್ದ ಮಗಳು ಮಲೈಕಾ ಮುಂಬೈನ ನಿವಾಸಕ್ಕೆ ಆಗಮಿಸಿದರು. ಮಾಜಿ ಪತಿ ಅರ್ಬಾಜ್ ಖಾನ್ ಕುಟುಂಬ, ರೂಮರ್ ಬಾಯ್ಫ್ರೆಂಡ್ (ಮಾಜಿ) ಅರ್ಜುನ್ ಕಪೂರ್ ಸೇರಿದಂತೆ ಬಾಲಿವುಡ್ನ ಗಣ್ಯರು ನಟಿಯ ಅಪಾರ್ಟ್ಮೆಂಟ್ಗೆ ಭೇಟಿ ಕೊಟ್ಟಿದ್ದಾರೆ.
ತಂದೆ ಆತ್ಮಹತ್ಯೆಗೆ ಶರಣಾದಾಗ ಮಲೈಕಾ ಅರೋರಾ ಮನೆಯಲ್ಲಿರಲಿಲ್ಲ. ಅವರು ಪುಣೆಯಲ್ಲಿದ್ದರು. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಮುಂಬೈಗೆ ಮರಳಿದ್ದಾರೆ. ಈ ಆಘಾತಕಾರಿ ಸುದ್ದಿ ತಿಳಿಯುತ್ತಿದ್ದಂತೆ ಮಲೈಕಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಆ ನಿವಾಸ ತಲುಪಿದರು. ದುರಂತ ನಡೆದ ಸ್ಥಳಕ್ಕೆ ಮೊದಲು ಆಗಮಿಸಿದ ಕುಟುಂಬಸ್ಥರಲ್ಲಿ ಅರ್ಬಾಜ್ ಖಾನ್ ಮೊದಲಿಗರು.
ಗೆಳೆಯ ಅರ್ಜುನ್ ಕಪೂರ್, ಮಗ ಆರ್ಹಾನ್ ಖಾನ್, ನಟರಾದ ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಅನನ್ಯಾ ಪಾಂಡೆ, ಚಂಕಿ ಪಾಂಡೆ ಸೇರಿದಂತೆ ಹಲವರು ಆಗಮಿಸಿದ್ದಾರೆ. ಮಾಜಿ ಪತಿ ಅರ್ಬಾಜ್ ಖಾನ್ (ಸಲ್ಮಾನ್ ಖಾನ್ ಸಹೋದರ) ಕುಟುಂಬಸ್ಥರು ಕೂಡಾ ಭೇಟಿ ಕೊಟ್ಟಿದ್ದಾರೆ. ಪಾಪರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ಸಲೀಮ್ ಖಾನ್, ಸಲ್ಮಾ ಖಾನ್, ಸೊಹೈಲ್ ಖಾನ್, ನಿರ್ವಾಣ್ ಕಾಣಿಸಿಕೊಂಡಿದ್ದಾರೆ. ಇವರಲ್ಲದೇ ಇನ್ನೂ ಹಲವರು ಭೇಟಿ ಕೊಟ್ಟಿದ್ದಾರೆ.
ಪೊಲೀಸರ ಪ್ರಕಾರ, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈವರೆಗೆ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಬಾಂದ್ರಾ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮೃತ ಅನಿಲ್ ಮೆಹ್ತಾ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆ ತಲುಪುವ ಮೊದಲೇ ಅವರು ಸಾವನ್ನಪ್ಪಿದ್ದಾರೆ. ಘಟನೆ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ.