ಹೈದರಾಬಾದ್:ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದೆ. ಮುಂಬೈನ 8 ಕ್ಷೇತ್ರಗಳಿಗೂ ಚುನಾವಣೆ ನಡೆಯುತ್ತಿದೆ. ತಮ್ಮ ಹಕ್ಕು ಚಲಾಯಿಸಲು ಮುಂಬೈನಲ್ಲಿ ಹಲವಾರು ಸೆಲೆಬ್ರಿಟಿಗಳು ಮತಗಟ್ಟೆಗಳಿಗೆ ಆಗಮಿಸಿದರು. ನಟ ಮತ್ತು ಶಿವಸೇನೆ ನಾಯಕ ಗೋವಿಂದ, ನಟಿ ಮತ್ತು ಸಂಸದೆ ಬಿಜೆಪಿ ಹೇಮಾ ಮಾಲಿನಿ, ಧರ್ಮೇಂದ್ರ, ಅನಿಲ್ ಕಪೂರ್, ಶಬಾನಾ ಅಜ್ಮಿ, ಅನುಪಮ್ ಖೇರ್ ಮತ್ತಿತರರು ಮತದಾನ ಮಾಡಿದರು.
‘ದಯವಿಟ್ಟು ಮನೆಯಿಂದ ಹೊರಗೆ ಬಂದು ಮತ ಚಲಾಯಿಸಿ’ ಎಂದು ನಟ ಗೋವಿಂದ ಮತ ಚಲಾಯಿಸಿದ ಬಳಿಕ ಮನವಿ ಮಾಡಿದರು. ಸಂಸದೆ ಹೇಮಾ ಮಾಲಿನಿ ಅವರು ಪುತ್ರಿ ಇಶಾ ಡಿಯೋಲ್ ಅವರೊಂದಿಗೆ ಮುಂಬೈನ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಬಳಿಕ ಅಸಂಖ್ಯಾತ ಜನರು ಮತ ಚಲಾಯಿಸಲು ಬಂದಿದ್ದಾರೆ. ಉಳಿದವರು ಕೂಡ ಮತ ಹಾಕಿ ಎಂದರು. ಸುನೀಲ್ ಶೆಟ್ಟಿ ಕೂಡ ಇಂದು ಬೆಳಗ್ಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು.
ಹಿರಿಯ ಧರ್ಮೇಂದ್ರ ಮತದಾನ:88 ವರ್ಷದ ಹಿರಿಯ ನಟ ಧರ್ಮೇಂದ್ರ ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿ, ಶಾಯಿ ಹಚ್ಚಿದ ತೋರು ಬೆರಳನ್ನು ಪ್ರದರ್ಶಿಸಿದರು. ಮುಂಬೈನ ಜುಹುವಿನ ಜಮ್ನಾಬಾಯಿ ನರ್ಸೀ ಶಾಲೆಯ ಮತಗಟ್ಟೆಯಲ್ಲಿ ಅವರು ಮತ ಹಾಕಿದರು.
ನಟ ರಣದೀಪ್ ಹೂಡಾ ಅವರು ಮತದಾನದ ನಂತರ ತಮ್ಮ ಬೆರಳಿಗೆ ಶಾಯಿಯ ಗುರುತನ್ನು ಪ್ರದರ್ಶಿಸಿದರು. ಕಬೀರ್ ಖಾನ್ ಮತ್ತು ಮಿನಿ ಮಾಥುರ್ ಮುಂಬೈನಲ್ಲಿ ಸೋಮವಾರ ಬೆಳಗ್ಗೆ ಒಟ್ಟಿಗೆ ಮತದಾನಕ್ಕೆ ಬಂದರು. ವರ್ಸೋವಾದಲ್ಲಿ ಮತದಾನ ಮಾಡಿದ ನಂತರ ನಟಿ ಶ್ರಿಯಾ ಸರನ್ ಮಾತನಾಡಿ, ದೇಶದ ಭವಿಷ್ಯದ ಏಳಿಗೆಗಾಗಿ ನಾನು ಮತ ಹಾಕಿದ್ದೇನೆ. ಎಲ್ಲರೂ ಮತ ಚಲಾಯಿಸಬೇಕು. ಯುವ ಪೀಳಿಗೆಯೂ ಸೇರಿದಂತೆ ಹಿರಿಯರೂ ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿ ಎಂದು ಕೋರಿದರು.