ಅಭಿಮಾನಿಗಳ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ಎರಡೂವರೆ ವರ್ಷ. ಆದರೆ ಈ ನಗುವಿನೊಡೆಯನ ನೆನಪು ಮಾತ್ರ ಸದಾ ಜೀವಂತ. ಚಿತ್ರರಂಗದ ಎಲ್ಲಾ ಹಿರಿ, ಕಿರಿಯ ಕಲಾವಿದರೊಂದಿಗೆ ಅಪ್ಪು ಆತ್ಮೀಯರಾಗಿದ್ದರು. ಬೆಳ್ಳಿತೆರೆ ಮೇಲೆ ನಕ್ಷತ್ರದಂತೆ ಮಿಂಚಿ ಮರೆಯಾಗಿರುವ ಪುನೀತ್ ನಿರ್ವಹಿಸಿದ ಪಾತ್ರಗಳೆಲ್ಲವೂ ವಿಭಿನ್ನವಾಗಿತ್ತು.
ಕೇವಲ 46ನೇ ವರ್ಷಕ್ಕೆ ಹೃದಯಾಘಾತದಿಂದ ಅಭಿಮಾನಿಗಳನ್ನು ಅಗಲಿದ ಪುನೀತ್ ಬಾಲ ನಟನಾಗಿ, ನಾಯಕ ನಟನಾಗಿ ವಿಭಿನ್ನ ಅಭಿನಯದ ಮೂಲಕ ಉತ್ತಮ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಕನ್ನಡ ಚಿತ್ರಪ್ರೇಮಿಗಳ ಮನ ಗೆದ್ದಿದ್ದರು. ನಟ, ಗಾಯಕ, ಆ್ಯಕ್ಷನ್ ಸ್ಟಾರ್, ಡ್ಯಾನ್ಸರ್ ಆಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಮೆಚ್ಚಿಸುವ ಜೊತೆಗೆ ಸಮಾಜಕ್ಕೆ ಆದರ್ಶವಾಗುವ ಪಾತ್ರಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು.
ಪುನೀತ್ ರಾಜ್‌ಕುಮಾರ್ ನಾಯಕನಟನಾಗಿ 2002ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಾಲನಟನಾಗಿದ್ದ ಪುನೀತ್, 'ಅಪ್ಪು' ಚಿತ್ರದಿಂದ ಬೆಳ್ಳಿತೆರೆ ಮೇಲೆ ನಾಯಕ ನಟನಾಗಿ ಪರಿಚಯಗೊಂಡರು. ನಂತರದ 19 ವರ್ಷದ ಸಿನಿ ಪಯಣದಲ್ಲಿ ಇತಿಹಾಸವನ್ನೇ ಸೃಷ್ಟಿಸಿದರು. ಪುನೀತ್ ಅವರಿಗೆ ಮನೆಯಲ್ಲಿ ಕರೆಯುತ್ತಿದ್ದ ಹೆಸರು ಅಪ್ಪು. ಇದೇ ಹೆಸರನ್ನೇ ಅವರು ನಾಯಕರಾಗಿ ಅಭಿನಯಿಸಿದ್ದ ಚೊಚ್ಚಲ ಚಿತ್ರಕ್ಕೂ ಇಡಲಾಯಿತು.
2002ರಲ್ಲಿ ತೆರೆಕಂಡ ಪುರಿ ಜಗನ್ನಾಥ್ ನಿರ್ದೇಶನದ ಅಪ್ಪು ಸಿನಿಮಾ ಮೂಲಕ ಪವರ್ ಸ್ಟಾರ್ ಸೆಂಚುರಿ ಬಾರಿಸುವ ಮೂಲಕ ಕನ್ನಡ ಚಿತ್ರರಂಗದ ದೊಡ್ಮನೆ ಹುಡುಗ ಎಂದು ಸಾಬೀತುಪಡಿಸಿದರು. ಮೊದಲ ಸಿನಿಮಾದಲ್ಲೇ ಭರ್ಜರಿ ಡ್ಯಾನ್ಸ್ ಮೂಲಕ ಗಮನ ಸೆಳೆದರು. 200 ದಿನಗಳ ನಿರಂತರ ಪ್ರದರ್ಶನ ಕಾಣುವಲ್ಲಿ ಅಪ್ಪು ಚಿತ್ರ ಯಶಸ್ವಿಯಾಯಿತು. ಬಳಿಕ ನಟಿಸಿದ್ದು 'ಅಭಿ' ಚಿತ್ರದಲ್ಲಿ. ನೈಜ ಕಥೆಯಾಧಾರಿತ ಅಭಿ ಸಿನಿಮಾದಲ್ಲಿ ಕಾಲೇಜ್ ಹುಡುಗನಾಗಿ ಪುನೀತ್ ರಾಜ್‌ಕುಮಾರ್ ಮಿಂಚಿದ್ದರು.
ಬಳಿಕ ತೆರೆಕಂಡ ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ಅರಸು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮೂಲಕ ನಂಬರ್ ಒನ್ ಸ್ಟಾರ್ ಪಟ್ಟ ಅಲಂಕರಿಸಿದರು. ಪುನೀತ್ ಅಭಿನಯಿಸಿರುವ ಸಿನಿಮಾಗಳ ಸಂಖ್ಯೆ ಕಡಿಮೆಯಿದ್ದರೂ ವಂಶಿ, ರಾಮ್, ಪೃಥ್ವಿ, ಜಾಕಿ, ಹುಡುಗರು, ಪರಮಾತ್ಮ, ಮಿಲನ, ಅಣ್ಣಾ ಬಾಂಡ್, ಯಾರೇ ಕೂಗಾಡಲಿ, ನಿನ್ನಂದಲೇ, ರಣವಿಕ್ರಮ, ಚಕ್ರವ್ಯೂಹ, ಅಂಜನೀಪುತ್ರ, ರಾಜಕುಮಾರ, ಯುವರತ್ನ, ಜೇಮ್ಸ್ ಹಾಗು ಗಂಧದ ಗುಡಿ ಚಿತ್ರಗಳು ದಿ ಬೆಸ್ಟ್ ಸಿನಿಮಾಗಳಾಗಿ ಉಳಿದುಕೊಂಡಿವೆ.