ಚಂದನವನದಲ್ಲಿ 2024ರ ಮೂರು ತಿಂಗಳಾಗುವಷ್ಟರಲ್ಲೇ 45 ರಿಂದ 50 ಸಿನಿಮಾಗಳು ಬಿಡುಗಡೆ ಆಗಿವೆ. ಅದರಲ್ಲಿ 'ಒಂದು ಸರಳ ಪ್ರೇಮ ಕಥೆ', 'ಕರಟಕ ದಮನಕ', 'ಬ್ಲಿಂಕ್' ಸೇರಿದಂತೆ ಬೆರಳಣಿಯಷ್ಟು ಸಿನಿಮಾಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಪ್ರತಿವಾರ 5ರಿಂದ 10 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈ ವಾರ ಕೂಡ ಪವರ್ ಸ್ಟಾರ್ 'ಜಾಕಿ' ಸೇರಿ ಏಳು ಚಿತ್ರಗಳು ಬಿಡುಗಡೆಯಾಗಲಿವೆ.
ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಈ ವಾರ 7 ಸಿನಿಮಾಗಳು ಜಿದ್ದಿಗೆ ಬಿದ್ದಂತೆ ರಿಲೀಸ್ ಆಗುತ್ತಿವೆ. ಜೊತೆಗೆ, ಇದೇ ತಿಂಗಳಿಂದ ಐಪಿಎಲ್ ಆರಂಭವಾಗುತ್ತಿದೆ. ಇವೆರಡೂ ಶುರುವಾದರೆ, ಚಿತ್ರಮಂದಿರದತ್ತ ಜನರು ಬರುವುದು ಕೊಂಚ ಕಮ್ಮಿ ಆಗಬಹುದು. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.
ಜಾಕಿ:ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ. ಇದರ ಅಂಗವಾಗಿ ನಾಳೆ 'ಜಾಕಿ' ಸಿನಿಮಾ ರೀ ರಿಲೀಸ್ ಆಗುತ್ತಿದೆ. ಪವರ್ ಸ್ಟಾರ್ ಔಟ್ ಅಂಡ್ ಔಟ್ ಮಾಸ್ ಲುಕ್ನಲ್ಲಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ ಮಾಸ್ಟರ್ ಪೀಸ್ ಚಿತ್ರ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಪವರ್ ಸ್ಟಾರ್ ಜೊತೆ ಭಾವನಾ ಮೆನನ್ ಸ್ಕ್ರೀನ್ ಹಂಚಿಕೊಂಡಿದ್ದರು.
ಕೆರೆಬೇಟೆ:ಟ್ರೈಲರ್ ಹಾಗೂ ಒಳ್ಳೆ ಕಂಟೆಂಟ್ ಆಧರಿಸಿರುವ ಚಿತ್ರ 'ಕೆರೆಬೇಟೆ'. ಗೌರಿಶಂಕರ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಕೆರೆಬೇಟೆ ಮಲೆನಾಡ ಸೊಗಡಿನ ಕಥೆ ಆಧರಿಸಿದೆ. ಗೌರಿ ಶಂಕರ್ ಜೋಡಿಯಾಗಿ ಬಿಂದು ಶಿವರಾಮ್ ನಾಯಕಿಯಾಗಿ ನಟಿಸಿದ್ದಾರೆ. ರಾಜ್‌ಗುರು ನಿರ್ದೇಶನದ ಈ ಸಿನಿಮಾವನ್ನು ಗೌರಿಶಂಕರ್ ಮತ್ತು ಜೈಶಂಕರ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಪಾತ್ರವರ್ಗದಲ್ಲಿ ಹರಿಣಿ, ಗೋಪಾಲ್ ದೇಶಪಾಂಡೆ, ರಾಕೇಶ್ ಪೂಜಾರಿ ಮುಂತಾದವರು ನಟಿಸಿದ್ದಾರೆ. ಇಡೀ ಸಿನಿಮಾ ಮಲೆನಾಡ ಸುಂದರ ಪ್ರದೇಶಗಳಲ್ಲಿ ಶೂಟಿಂಗ್ ಆಗಿದೆ. ಕೆರೆಬೇಟೆ ಕ್ರೀಡೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು, ಲವ್ ಸ್ಟೋರಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕರು.
ಸೋಮು ಸೌಂಡ್ ಎಂಜಿನಿಯರ್:ನಿರ್ದೇಶಕ ದುನಿಯಾ ಸೂರಿ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಅಭಿ, ಈಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. 'ಸೋಮು ಸೌಂಡ್ ಎಂಜಿನಿಯರ್' ಎಂಬ ಸಿನಿಮಾವನ್ನು ಅಭಿ ನಿರ್ದೇಶನ ಮಾಡಿದ್ದು, ಇದರಲ್ಲಿ ಹೀರೋ ಆಗಿ ಶ್ರೇಷ್ಠ ಕಾಣಿಸಿಕೊಂಡಿದ್ದಾರೆ. 'ಕಡ್ಡಿಪುಡಿ', 'ಸಲಗ' ಸೇರಿದಂತೆ ಈಗಾಗಲೇ ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿರುವ ಶ್ರೇಷ್ಠ, ಈಗ 'ಸೋಮು ಸೌಂಡ್ ಎಂಜಿನಿಯರ್' ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಚರಣ್ ರಾಜ್ ಸಂಗೀತ ನೀಡಿರುವ ಈ ಸಿನಿಮಾದ ಹಾಡುಗಳು ಈಗಾಗಲೇ ಗಮನ ಸೆಳೆದಿದ್ದು, ನಾಳೆ ಪ್ರೇಕ್ಷಕರ ಮುಂದೆ ಬರುತ್ತಿದೆ.