ಹಿಂದೂಗಳ ಪವಿತ್ರ ಹಬ್ಬವಾಗಿರೋ 'ಹೋಳಿ' ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಬಾಲಿವುಡ್ನ ಖ್ಯಾತ ನಿರ್ದೇಶಕಿ ಮತ್ತು ನೃತ್ಯ ನಿರ್ದೇಶಕಿ ಫರಾ ಖಾನ್ (Farah Khan) ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿದೆ. ಹಿಂದೂಸ್ತಾನಿ ಭಾವು (Hindustani Bhau) ಎಂದೇ ಜನಪ್ರಿಯರಾಗಿರುವ ವಿಕಾಸ್ ಫಾಟಕ್, ತಮ್ಮ ವಕೀಲ ಅಲಿ ಕಾಶಿಫ್ ಖಾನ್ ದೇಶ್ಮುಖ್ ಮೂಲಕ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿರ್ದೇಶಕಿ ಫರಾ ಖಾನ್ ಹೋಳಿ "ಛಪ್ರೀಸ್"ಗಳ ಆ್ಯಕ್ಟಿವಿಟಿ (Holi is an activity of "chhapris'') ಎಂದು ಹೇಳಿದ್ದಾರೆ. ಅಂದರೆ ಸಂಸ್ಕೃತಿಯಿಲ್ಲದ ವ್ಯಕ್ತಿಗಳ ಚಟುವಟಿಕೆ ಎಂದಿದ್ದಾರೆ. ಈ ಪದವನ್ನು ಅವಹೇಳನಕಾರಿಯಾಗಿ ಇಲ್ಲಿ ಬಳಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹೇಳಿಕೆ ಖಂಡಿತವಾಗಿಯೂ ಅವಹೇಳನಕಾರಿ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ಪ್ರಯತ್ನ ಎಂದು ವಿಕಾಸ್ ಫಾಟಕ್ ತಿಳಿಸಿದ್ದಾರೆ.
ಇಂಥ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವನ್ನು ವಕೀಲ ಅಲಿ ಕಾಶಿಫ್ ಖಾನ್ ದೇಶ್ಮುಖ್ ಒತ್ತಿ ಹೇಳಿದ್ದಾರೆ. "ಧರ್ಮಗಳ ವಿರುದ್ಧ ದ್ವೇಷ, ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ನನ್ನ ಕಕ್ಷಿದಾರರು ಆರಂಭದಿಂದಲೂ ಧ್ವನಿ ಎತ್ತುತ್ತಾ ಬಂದಿದ್ದಾರೆ. ಬಾಲಿವುಡ್ನಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದಾರೆಂದು ಹೇಳಿಕೊಳ್ಳುವ ಜನರು ತಮ್ಮ ಮಾತುಗಳ ಮೇಲೆ ನಿಯಂತ್ರಣ ಹೊಂದಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ" ಎಂದು ತಿಳಿಸಿದರು.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ವಿವಿಧ ವಿಭಾಗಗಳಾದ ಸೆಕ್ಷನ್ 196, 299, 302 ಮತ್ತು 353ರಡಿ ಫರಾ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಫರಾ ಖಾನ್ ಭಾರತೀಯ ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಬರುವ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡೋ ಮೂಲಕ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: 'ತಮಿಳರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, ಭಾಷಾ ವಿಷಯದೊಂದಿಗೆ ಆಟವಾಡಬೇಡಿ': ಕಮಲ್ ಹಾಸನ್
ದೂರು ದಾಖಲಾಗಿದೆ. ಆದ್ರೆ ಖಾರ್ ಪೊಲೀಸರು ಈ ವಿಷಯದಲ್ಲಿ ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದರಾದರೂ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.
ಇದನ್ನೂ ಓದಿ: ರಿಷಬ್ ಶೆಟ್ಟಿ ದಂಪತಿ ಜೊತೆ ಮಲಯಾಳಂ ನಟ ಜಯಸೂರ್ಯ: ಫೋಟೋ
ಗುರುವಾರ ಟಿವಿ ಶೋ ಒಂದರಲ್ಲಿ ಈ ಹೇಳಿಕೆ ನೀಡಿದ ಬಳಿಕ ವಿವಾದ ಪ್ರಾರಂಭವಾಯಿತು. ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರ್ದೇಶಕರು ಹಿಂದೂ ಪದ್ಧತಿಗಳನ್ನು ಅವಮಾನಿಸಿದ್ದಾರೆಂದು ಅನೇಕರು ಆರೋಪಿಸಿದರು. ಸಾಮಾಜಿಕ ಸಮಸ್ಯೆಗಳ ಬಗ್ಗೆ ತಮ್ಮ ಸ್ಪಷ್ಟ ನಿಲುವಿಗೆ ಹೆಸರುವಾಸಿಯಾಗಿರುವ ಹಿಂದೂಸ್ತಾನಿ ಭಾವು, ಫರಾ ಖಾನ್ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.