ದಕ್ಷಿಣ ಚಿತ್ರರಂಗದ ಖ್ಯಾತ ನಟ-ರಾಜಕಾರಣಿ ಕಮಲ್ ಹಾಸನ್ ಅವರು ತಮಿಳಿಗರಲ್ಲಿನ ಭಾಷೆಯ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ಒಂದು ವೇಳೆ ಆ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಗುರಿ ಹೊಂದಿದ್ದರೆ, ಅಂತಹ ಯಾವುದೇ ಕ್ರಮದ ವಿರುದ್ಧ ಎಚ್ಚರಿಕೆ ನೀಡಿದರು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹೇರಿಕೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಡಿಎಂಕೆ ನೇತೃತ್ವದ ತಮಿಳುನಾಡು ರಾಜ್ಯ ಸರ್ಕಾರದ ನಡುವೆ ರಾಜಕೀಯವಾಗಿ ವಾದ ವಿವಾದ ಮುಂದುವರಿದಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಇಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷದ ಎಂಟನೇ ಸಂಸ್ಥಾಪನಾ ದಿನ ಹಿನ್ನೆಲೆ ಮಾತನಾಡಿದ ಸೌತ್ ಸೂಪರ್ ಸ್ಟಾರ್, ತಮ್ಮ ಭಾಷಾ ಗುರುತಿಗಾಗಿ ತಮಿಳು ಜನರು ಮಾಡಿರುವ ಐತಿಹಾಸಿಕ ತ್ಯಾಗಗಳನ್ನು ಒತ್ತಿ ಹೇಳಿದರು. "ಭಾಷೆಗಾಗಿ ತಮಿಳರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆ ವಿಷಯಗಳೊಂದಿಗೆ ಆಟವಾಡಬೇಡಿ" ಎಂದು ಎಚ್ಚರಿಸಿದರು. "ತಮಗೆ ಯಾವ ಭಾಷೆ ಬೇಕು ಎಂಬುದು ತಮಿಳುನಾಡಿನ ಮಕ್ಕಳಿಗೂ ತಿಳಿದಿದೆ. ಅವರಿಗೆ ಆಯ್ಕೆ ಮಾಡುವ ಜ್ಞಾನವಿದೆ" ಎಂದು ಅವರು ಕೇಂದ್ರದ ಹಿಂದಿ ಸೇರಿ ತ್ರಿಭಾಷಾ ನೀತಿಗೆ ಒತ್ತಾಯಿಸುತ್ತಿರುವುದನ್ನು ಪರೋಕ್ಷವಾಗಿ ಟೀಕಿಸಿದರು.
Chennai, Tamil Nadu: Makkal Needhi Maiam President & actor Kamal Haasan says, " those who try to seize control of our language must understand the significance of this place...some criticize me as a failed politician. i believe my failure lies in not entering politics 20 years… pic.twitter.com/v8GkzM0IPK
— IANS (@ians_india) February 21, 2025
ಕೇಂದ್ರ ಶಿಕ್ಷಣ ಯೋಜನೆಯಾದ ಸರ್ವ ಶಿಕ್ಷಣ ಅಭಿಯಾನ (ಎಸ್‌ಎಸ್‌ಎ)ದ ಅಡಿ 2,152 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಬೆನ್ನಲ್ಲೇ ವಿವಾದ ಉಲ್ಬಣಗೊಂಡಿದೆ. ತಮಿಳುನಾಡು ಎನ್‌ಇಪಿ ಜಾರಿಗೆ ತರಲು ನಿರಾಕರಿಸಿದರೆ ಹಣವನ್ನು ತಡೆಹಿಡಿಯಬಹುದು ಎಂಬ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ ಬಗ್ಗೆ ಸಿಎಂ ಸ್ಟಾಲಿನ್ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ತ್ರಿಭಾಷಾ ನೀತಿ: 'ಹಾಸ್ಯಾಸ್ಪದ ಆಟ ನಮ್ಮೊಂದಿಗೆ ನಡೆಯಲ್ಲ' ಎಂದ ಪ್ರಕಾಶ್ ರಾಜ್
"ಇದು ನಮ್ಮ ರಾಜ್ಯದ ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರಲ್ಲಿ ಆತಂಕ, ಅಶಾಂತಿಯನ್ನು ಸೃಷ್ಟಿಸಿದೆ" ಎಂದು ಸಿಎಂ ಸ್ಟಾಲಿನ್ ತಿಳಿಸಿದ್ದಾರೆ. ಜೊತೆಗೆ, ಪ್ರಧಾನಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 242 ಕೋಟಿ ಕಲೆಕ್ಷನ್: 'ಛಾವಾ ದೇಶಾದ್ಯಂತ ಸದ್ದು ಮಾಡಿದೆ' ಎಂದ ಪಿಎಂ ಮೋದಿ
ಸ್ಟಾಲಿನ್ ಅವರ ಮಾತುಗಳಿಗೆ ಪ್ರತಿಕ್ರಿಯೆಯಾಗಿ, ಸಚಿವ ಪ್ರಧಾನ್ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಎನ್‌ಇಪಿ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು. ಈ ನೀತಿಯು ನಿರ್ದಿಷ್ಟ ಭಾಷೆಯನ್ನು ಹೇರುತ್ತದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದರು. ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ದಕ್ಷಿಣ ರಾಜ್ಯಗಳು "ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ" ಬೆಳೆಯಬೇಕೆಂದು ಕರೆ ನೀಡಿದರು.