ವಿಧು ವಿನೋದ್ ಚೋಪ್ರಾ ನಿರ್ದೇಶನದ '12th ಫೇಲ್' ಸಿನಿಮಾ ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಾಲಿಗೀಗ ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಹೊಸ ಸೇರ್ಪಡೆ. ಒಂದೊಳ್ಳೆ ಸಿನಿಮಾ ಕೊಟ್ಟಿದ್ದಕ್ಕಾಗಿ ನಟ ವಿಕ್ರಾಂತ್ ಮಾಸ್ಸೆ ಮತ್ತು ನಿರ್ದೇಶಕ ವಿಧು ವಿನೋದ್ ಚೋಪ್ರಾ ಸೇರಿ ಸಂಪೂರ್ಣ ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.
ವಿಧು ವಿನೋದ್ ಚೋಪ್ರಾ ಅವರ ಈ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ ಮತ್ತು ಮೇಧಾ ಶಂಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕರೀನಾ ಅವರು ಈ ಚಿತ್ರವನ್ನು ಗುಣಗಾನ ಮಾಡಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟಿಯ ಅಭಿಮಾನಿಯಾಗಿರುವ ವಿಕ್ರಾಂತ್, ಕರೀನಾ ಅವರ ಇನ್ಸ್ಟಾ ಸ್ಟೋರಿಯನ್ನು ರೀಪೋಸ್ಟ್ ಮಾಡಿ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕರೀನಾ ತಮ್ಮ ಅಫೀಶಿಯಲ್ ಇನ್ಸ್ಟಾಗ್ರಾಮ್ ಅಕೌಂಟ್ನ ಸ್ಟೋರಿ ವಿಭಾಗದಲ್ಲಿ, "12th ಫೇಲ್. ವಿಧು ವಿನೋದ್ ಚೋಪ್ರಾ, ವಿಕ್ರಾಂತ್ ಮಾಸ್ಸೆ, ಮೇಧಾ ಶಂಕರ್, ಅನಂತ್ ವಿ ಜೋಶಿ, ಅಂಶುಮಾನ್ ಪುಷ್ಕರ್ ಸೇರಿ ಸಂಪೂರ್ಣ ಪಾತ್ರವರ್ಗ ಮತ್ತು ಸಿಬ್ಬಂದಿ, ಲೆಜೆಂಡ್ಸ್" ಎಂದು ಬರೆದುಕೊಂಡಿದ್ದಾರೆ. ಇದೇ ಸ್ಟೋರಿಯನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರೀಶೇರ್ ಮಾಡಿದ ಮಾಸ್ಸೆ, "ಬಸ್, ಅಬ್ ಮೇ ರಿಟೈರ್ ಹೋ ಸಕ್ತಾ ಹೂನ್! ಬಹಳ ಧನ್ಯವಾದಗಳು ಮೇಡಮ್! ನಿಮ್ಮ ಈ ಪ್ರತಿಕ್ರಿಯೆ ನನಗೆ ಎಷ್ಟು ಮಹತ್ವದ್ದು ಎಂಬುದು ನಿಮಗೆ ತಿಳಿದಿಲ್ಲ'' ಎಂದು ಬರೆದುಕೊಂಡಿದ್ದಾರೆ.
ವಿಧು ವಿನೋದ್ ಚೋಪ್ರಾ ನಿರ್ದೇಶನದ 12th ಫೇಲ್ ಸಿನಿಮಾದ ಕಥೆ ಯುಪಿಎಸ್ಸಿ ಆಕಾಂಕ್ಷಿಗಳ ಬಗ್ಗೆ ಮಾತನಾಡಿದೆ. ಅಲ್ಲದೇ ಇದು ನೈಜ ಕಥೆಯನ್ನಾಧರಿಸಿದ ಚಿತ್ರ. ಯುಪಿಎಸ್ಸಿ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವ ಲಕ್ಷಾಂತರ ವಿದ್ಯಾರ್ಥಿಗಳ ದೈನಂದಿನ ಸವಾಲುಗಳನ್ನು ವಿವರಿಸಿದೆ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಅವರ ಪತ್ನಿ, ಐಆರ್ಎಸ್ ಅಧಿಕಾರಿ ಶ್ರದ್ಧಾ ಜೋಶಿ ಕಥೆಯನ್ನು ಚಿತ್ರಿಸಿದೆ. ಚಂಬಲ್ನ ಯುವಕ ಮನೋಜ್ ಅವರ ಪ್ರಯಾಣವನ್ನು ತೆರೆ ಮೇಲೆ ರವಾನಿಸಿದೆ. ವರ್ಷಗಳ ಕಠಿಣ ಪ್ರಯತ್ನದ ನಂತರ ಅಂತಿಮವಾಗಿ ಐಪಿಎಸ್ ಅಧಿಕಾರಿಯಾಗುತ್ತಾರೆ.