ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ದೇಶಕ - ನಿರ್ಮಾಪಕ ಕರಣ್ ಜೋಹರ್ ತಮ್ಮ ಮುಂದಿನ ಪ್ರೊಜೆಕ್ಟ್ ಘೋಷಿಸಿ, ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದಾರೆ. ನಿಜ ಜೀವನದ ಪ್ರೇಮಕಥೆಗಳ ಆರು ಭಾಗಗಳ ಸೀರೀಸ್ 'ಲವ್ ಸ್ಟೋರಿಯಾನ್' ಪ್ರೇಮಿಗಳ ದಿನದಂದು ಬಿಡುಗಡೆ ಆಗಲಿದೆ.
ಪ್ರೇಮಿಗಳ ದಿನದ ವಿಶಿಷ್ಟ ಸಂದರ್ಭಕ್ಕಾಗಿ ನಿಜ - ಜೀವನದ ಪ್ರೇಮ ಕಥೆಗಳ ಸರಣಿಯನ್ನು ಸಂಗ್ರಹಿಸಿದ್ದೇನೆ ಎಂದು ಕರಣ್ ಜೋಹರ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬಹಿರಂಗಪಡಿಸಿದ್ದಾರೆ. ಈ ಸರಣಿಯು, ದೇಶಾದ್ಯಂತದ ಆರು ಜೋಡಿಗಳ ಕಥೆಯನ್ನೊಳಗೊಂಡಿದೆ. ಅವರು ತಮ್ಮ ಪ್ರೀತಿ, ಭರವಸೆ, ಸಂತೋಷ ಮತ್ತು ಗೆಲುವಿನ ಕಥೆಗಳನ್ನು ಹಂಚಿಕೊಂಡಿದ್ದಾರೆ. ಈ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ ಕರಣ್ ಜೋಹರ್, "ಭಾರತದಾದ್ಯಂತದ ಸಚ್ಚಿ ಮೊಹಬ್ಬತ್ ಕಿ ಸಚ್ಚಿ ಕಹಾನಿಯಾನ್ - ಈ ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಬಳಿಗೆ ಬರಲಿದೆ. ಫೆಬ್ರವರಿ 14 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮಾತ್ರ 'ಲವ್ ಸ್ಟೋರಿಯಾನ್' ಸೀರಿಸ್ ಲಭ್ಯವಾಗಲಿದೆ'' ಎಂದು ಬರೆದುಕೊಂಡಿದ್ದಾರೆ.
ಅಕ್ಷಯ್ ಇಂಡಿಕರ್, ಅರ್ಚನಾ ಫಡ್ಕೆ, ಕೊಲಿನ್ ಡಿ'ಕುನ್ಹಾ, ಹಾರ್ದಿಕ್ ಮೆಹ್ತಾ, ಶಾಜಿಯಾ ಇಕ್ಬಾಲ್ ಮತ್ತು ವಿವೇಕ್ ಸೋನಿ ಎಂಬ ಆರು ನಿರ್ದೇಶಕರು ಈ ಸೀರಿಸ್ನಲ್ಲಿ ಕೆಲಸ ಮಾಡಿದ್ದಾರೆ. ಧರ್ಮಟಿಕ್ ಎಂಟರ್‌ಟೈನ್‌ಮೆಂಟ್ ಈ ಸೀರೀಸ್ ಅನ್ನು ನಿರ್ಮಾಣ ಮಾಡಿದೆ. ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಸೋಮೆನ್ ಮಿಶ್ರಾ ಕಾರ್ಯ ನಿರ್ವಾಹಕ ನಿರ್ಮಾಪಕರಾಗಿ ಈ ತಂಡದ ಭಾಗವಾಗಿದ್ದಾರೆ. ಈ ಸೀರಿಸ್, ಮಾಜಿ ಪತ್ರಕರ್ತರಾದ ಪ್ರಿಯಾ ರಮಣಿ, ಸಮರ್ ಹಲರ್ನ್‌ಕರ್ ಮತ್ತು ನಿಲೋಫರ್ ವೆಂಕಟರಮಣ್ ಅವರು ಸ್ಥಾಪಿಸಿದ ಸೋಷಿಯಲ್ ಮೀಡಿಯಾ ಕಮ್ಯುನಿಟಿ 'ಇಂಡಿಯಾ ಲವ್ ಪ್ರಾಜೆಕ್ಟ್'ನ ನಿಜ ಜೀವನದ ಕಥೆಗಳಿಂದ ಪ್ರೇರಿತವಾಗಿದೆ.
ಇದನ್ನೂ ಓದಿ:ರಿಲೀಸ್ಗೆ ರೆಡಿ 'ನಗುವಿನ ಹೂಗಳ ಮೇಲೆ': ಹಿರಿತೆರೆಯಲ್ಲಿ ಮೋಡಿ ಮಾಡಲು ಸಜ್ಜಾಯ್ತು ಕಿರುತೆರೆ ಜೋಡಿ
ಕರಣ್ ಜೋಹರ್ ಅವರ ಧರ್ಮಟಿಕ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದ ಈ ಸೀರೀಸ್ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಪ್ರೈಮ್ ವಿಡಿಯೋದಲ್ಲಿ ಲಾಂಚ್ ಆಗಲಿದೆ. ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಗಮ್ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳ ನಿರ್ದೇಶಕ ಕರಣ್ ಜೋಹರ್, 'ಅಭಿಮಾನಿಗಳಿಗೆ ನಿಜ ಜೀವನದ ಕಥೆಗಳನ್ನು ಹೇಳುವ ಧರ್ಮಟಿಕ್‌ನ ಮೊದಲ ಪ್ರಯತ್ನ ಇದು' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕುಗ್ಗಿದ ಗಳಿಕೆ: 'ಫೈಟರ್' ಚಿತ್ರ 12 ದಿನದ ಕಲೆಕ್ಷನ್ ಹೀಗಿದೆ!