ಮೈಸೂರು: "ಯದುವೀರ್ ಅವರು ಮೈಸೂರು ಅರಮನೆಗೆ ದತ್ತು ಪುತ್ರ, ಒರಿಜಿನಲ್ (ಮೂಲ) ರಾಜವಂಶಸ್ಥರಲ್ಲ" ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ನಾವು ಮಹಾರಾಜರ ವಿರುದ್ಧ ಇದ್ದೇವೆ ಎಂದು ಬಿಂಬಿಸುವುದು ಸರಿಯಲ್ಲ. ಅಸಲಿ ಮೈಸೂರು ರಾಜವಂಶಸ್ಥರಿಗೆ (ಶ್ರೀಕಂಠದತ್ತ ನರಸಿಂಹರಾಜ ಒಡೆಯರ್) ನಾವು ಟಿಕೆಟ್ ಕೊಟ್ಟು ಗೆಲ್ಲಿಸಿದ್ದೆವು. ಈಗಿರುವವರು (ಯದುವೀರ್) ದತ್ತು ಪಡೆದುಕೊಂಡಿರುವವರು. ಅವರು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಿ" ಎಂದರು.
ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿವಾದ: ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರಿಡುವುದಕ್ಕೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿ, "ವಾಸ್ತವ ತಿಳಿದುಕೊಳ್ಳಲೆಂದು ನನ್ನ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ನಗರಪಾಲಿಕೆ ಆಯುಕ್ತರನ್ನು ಮಂಗಳವಾರ ಭೇಟಿ ಮಾಡಿತ್ತು. ಆ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂಬ ಹೆಸರಿಟ್ಟಿರುವ ಬಗ್ಗೆ ದಾಖಲೆಗಳೇ ಇಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಕಾನೂನಾತ್ಮಕವಾಗಿ ನಾಮಕರಣ ಪ್ರಕ್ರಿಯೆ ನಡೆಸಬೇಕು ಎಂದು ನಾವು ಕೇಳಿಕೊಂಡಿದ್ದೇವೆ. ನಾವು ಹೆಸರಿಡುವ ವಿಚಾರವಾಗಿ ಹಿಂದೆ ಸರಿಯುವುದೇ ಇಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಸದ ಯದುವೀರ್ ಅವರು ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಿರುವುದಕ್ಕೆ ದಾಖಲೆಗಳಿದ್ದರೆ ಕೊಡಲಿ. ಕೆಆರ್‌ಎಸ್ ಸಂಪರ್ಕಿಸುವ ರಸ್ತೆಯಾದ್ದರಿಂದ ಜನರು ಕೆಆರ್‌ಎಸ್ ರಸ್ತೆ ಎಂದು ಕರೆಯುತ್ತಿದ್ದಾರೆ. ಸಿದ್ದರಾಮಯ್ಯನವರು ಮೈಸೂರಿಗೆ ನೀಡಿರುವ ಕೊಡುಗೆ ಅನನ್ಯ. ಅದನ್ನು ಪರಿಗಣಿಸಿ ಆ ರಸ್ತೆಗೆ ಅವರ ಹೆಸರು ನಾಮಕರಣ ಮಾಡುವಂತೆ ಜನರ ಒತ್ತಾಸೆಯೂ ಇತ್ತು. ಈ ನಿಟ್ಟಿನಲ್ಲಿ ಪಾಲಿಕೆ ಕ್ರಮ ಕೈಗೊಂಡಿದೆ" ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆ ಪ್ರಶ್ನೆಯೇ ಇಲ್ಲ: "ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರವಿಲ್ಲ. ಅವರ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ. ಆ ಗುತ್ತಿಗೆದಾರ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರಿದ್ದರೆ, ಏನಾದರೂ ದಾಖಲೆಗಳಿದ್ದರೆ ಅಥವಾ ಅವರ ಪಾತ್ರವೇನಾದರೂ ಇದ್ದರೆ ತೋರಿಸಲಿ" ಎಂದು ಎಂ.ಲಕ್ಷ್ಮಣ್ ಸವಾಲು ಹಾಕಿದರು.
"ಪ್ರಿಯಾಂಕ್ ಸಚಿವರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ಜನವಿರೋಧಿ ಕೆಲಸಗಳ ಬಗ್ಗೆ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಅದೇ ಅವರಿಗೆ ಮುಳುವಾದಂತೆ ಕಾಣುತ್ತಿದೆ. ಆದರೆ, ಪಕ್ಷದಿಂದ ಬಿಜೆಪಿಯವರ ಆರೋಪಕ್ಕೆ ಸೊಪ್ಪು ಹಾಕುವುದಿಲ್ಲ. ಆ ಗುತ್ತಿಗೆದಾರ ಡೆತ್‌ನೋಟ್‌ನಲ್ಲಿ ಎಂಟು ಮಂದಿಯ ಹೆಸರು ಬರೆದಿದ್ದಾರೆ. ಅವರ ವಿರುದ್ಧ ಪಕ್ಷದಿಂದ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ರಾಜು ಕಪನೂರ ಎಂಬಾತ ಬಿಜೆಪಿ ಮುಖಂಡರ ಜೊತೆಯೂ ಗುರುತಿಸಿಕೊಂಡಿದ್ದಾನೆ. ಹೀಗಿರುವಾಗ, ಬಿಜೆಪಿಯವರು ಪ್ರಿಯಾಂಕ್ ರಾಜೀನಾಮೆ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ" ಎಂದರು.
"ಬಿಜೆಪಿಯವರು ದಲಿತರ ಏಳಿಗೆ ಸಹಿಸಲಾಗದೇ ಪಿತೂರಿ ಮಾಡುತ್ತಿದ್ದಾರೆ, ವಿಷ ಕಾರುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಕ್ಷಮೆ ಕೇಳಿಸುವ ಕೆಲಸವನ್ನು ಆ ಪಕ್ಷದವರು ಮಾಡಲಿಲ್ಲ" ಎಂದು ಆರೋಪಿಸಿದರು.
"ಸಚಿವರ ದನಿ ಅಡಗಿಸಬೇಕು, ತೇಜೋವಧೆ ಮಾಡಬೇಕು, ಅವರಿಗೆ ಸಿಗುತ್ತಿರುವ ಜನಪ್ರಿಯತೆ ಕಡಿಮೆ ಮಾಡಬೇಕು ಹಾಗೂ ಹೆಸರಿಗೆ ಮಸಿ ಬಳಿಯಬೇಕು ಎಂಬ ಉದ್ದೇಶದಿಂದ ಬಿಜೆಪಿಯವರು ಪಿತೂರಿ ಮಾಡುತ್ತಿದ್ದಾರೆ. ಪ್ರಿಯಾಂಕ್ ಇನ್ನೂ ಯುವಕ. ಇಂದಲ್ಲ ನಾಳೆ ಇನ್ನೂ ಉನ್ನತ ಸ್ಥಾನಕ್ಕೆ ಹೋಗಲಿದ್ದಾರೆ. ಅದನ್ನು ಸಹಿಸಲಾಗದೆ ಬಿಜೆಪಿಯವರು ಷಡ್ಯಂತ್ರ ಮಾಡುತ್ತಿದ್ದಾರೆ. ಅದ್ಯಾವುದಕ್ಕೂ ಅವರಾಗಲಿ ಅಥವಾ ಪಕ್ಷವಾಗಲಿ ಜಗ್ಗುವುದಿಲ್ಲ" ಎಂದು ಹೇಳಿದರು.
ಪಕ್ಷದ ನಗರ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಎಂ. ಶಿವಣ್ಣ, ಗಿರೀಶ್, ಪದಾಧಿಕಾರಿಗಳಾದ ಭಾಸ್ಕರ್, ಮಹೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿದ ಆರೋಪ: 13 ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್