'ಪೌಡರ್'. ಸ್ಯಾಂಡಲ್ವುಡ್ನ ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಕಾಮಿಡಿ ಡ್ರಾಮಾ. ಶೀರ್ಷಿಕೆ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಚಿತ್ರ ಇತ್ತೀಚೆಗಷ್ಟೇ ಟ್ರೇಲರ್ ಅನಾವರಣಗೊಳಿಸಿತ್ತು. ಇನ್ನೊಂದು ವಾರದಲ್ಲಿ ಬಿಡುಗಡೆ ಆಗಲಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದೆ. ಇತರೆ ಚಿತ್ರತಂಡಗಳಂತೆ ಕನ್ನಡ ಚಿತ್ರರಂಗದ ಯಶಸ್ಸಿಗೆ ಪೌಡರ್ ತಂಡ ಕೂಡ ಶ್ರಮಿಸುತ್ತಿದ್ದು, ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಕೊಟ್ಟಿದೆ.
ಸಿನಿಮಾ ಹಿಂದಿರುವ ಕೆಆರ್ಜಿ ಸ್ಟುಡಿಯೋಸ್ ಮತ್ತು ನಾಯಕ ನಟ ದಿಗಂತ್ ಮಂಚಾಲೆ ಇಂದು ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪೋಸ್ಟ್ ಶೇರ್ ಮಾಡಿ ಸೆನ್ಸಾರ್ ಪರೀಕ್ಷೆಯಲ್ಲಿ ತಮ್ಮ ಚಿತ್ರ ಪಾಸಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಪೌಡರ್ ಪೋಸ್ಟರ್ ಬಹಳ ಅರ್ಥಪೂರ್ಣವಾಗಿದೆ. ಚಿತ್ರ ಯು/ಎ ಸರ್ಟಿಫಿಕೇಟ್ ಪಡೆದಿದ್ದು, U/A ಎಂಬುದು ಕೇಸರಿ ಬಿಳಿ ಹಸಿರು ಬಣ್ಣದಲ್ಲಿದೆ. ಜೊತೆಗೆ, ಪೌಡರ್ ಕೂಡ ಕೇಸರಿ ಬಣ್ಣದಲ್ಲಿ ಎದ್ದು ಕಾಣುತ್ತಿದೆ.
ಪೌಡರ್ ಒಂದು ಹಾಸ್ಯಮಯ ಸಿನಿಮಾ. ಜನಾರ್ಧನ್ ಚಿಕ್ಕಣ್ಣ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯಾ ರಾಮ್ಕುಮಾರ್ ಮುಖ್ಯಭೂಮಿಕೆಯಲ್ಲಿದ್ದು, ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ, ರಂಗಾಯಣ ರಘು, ಅನಿರುದ್ಧ್ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ನಾಗಭೂಷಣ್ ಸೇರಿದಂತೆ ಹಲವರು ಈ ಪೌಡರ್ ಚಿತ್ರದಲ್ಲಿ ನಟಿಸಿದ್ದಾರೆ.
ಒಂದು ಮ್ಯಾಜಿಕಲ್ ಪೌಡರ್ ಪ್ರಭಾವಕ್ಕೊಳಗಾಗಿ ಯುವಕರು ಶ್ರೀಮಂತರಾಗಲು ಮಾಡುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ನಿಜವಾಗಿಯೂ ಈ ಪೌಡರ್ ವರ್ಕ್ಔಟ್ ಆಗುತ್ತಾ? ಅದನ್ನು ಬಳಸಿದ ಮೇಲೆ ಅವರಿಗೆ ಎದುರಾದ ಸವಾಲುಗಳೇನು? ಎಂಬುದರ ಸುತ್ತ ಕಥೆ ಸಾಗುತ್ತದೆ. ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಸಂಪೂರ್ಣ ಕುಟುಂಬ ಒಟ್ಟಿಗೆ ಕುಳಿತು ನೋಡಬಹುದಾದ ಹಾಸ್ಯಚಿತ್ರವಾಗಿದ್ದು, ಸೆನ್ಸಾರ್ ಪರೀಕ್ಷೆಯಲ್ಲೂ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದೆ.