ನವದೆಹಲಿ: ದೇಶದ ಮೊದಲ ಮಹಿಳಾ ಬಸ್ ಡಿಪೋವನ್ನು (ಸಖಿ ಡಿಪೋ) ಸರೋಜಿನಿನಗರದಲ್ಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಉದ್ಘಾಟಿಸಿದರು. ಮಹಿಳಾ ಬಸ್ ಡ್ರೈವರ್ ಮತ್ತು ಕಂಡಕ್ಟರ್‌ಗಳಿಗೆ ಸಾರಿಗೆ ಕ್ಷೇತ್ರದಲ್ಲಿ ತಮ್ಮ ಹಕ್ಕುಗಳು ಪಡೆಯಲು ಇದು ದಿಟ್ಟ ಹೆಜ್ಜೆಯಾಗಿದೆ. ಈ ಡಿಪೋ ಮೂಲಕ ಮಹಿಳಾ ಉದ್ಯೋಗಿಗಳು ತಮ್ಮ ಕೆಲಸದ ಸ್ಥಳದಲ್ಲಿ ಭದ್ರತೆ ಮತ್ತು ಗೌರವವನ್ನು ಪಡೆಯುತ್ತಾರೆ.
ಇದೇ ವೇಳೆ ಡಿಪೋದಲ್ಲಿ ಮಹಿಳೆಯರು ಕೆಲಸ ಮಾಡಲು ಪೂರಕ ವಾತಾವರಣ ಇಲ್ಲ ಎಂದು ಮಹಿಳಾ ನೌಕರರು ಪ್ರತಿಭಟನೆ ನಡೆಸಿದರು. ನಿಗದಿತ ವೇತನ ಹಾಗೂ ಖಾಯಂ ಉದ್ಯೋಗದ ಭರವಸೆಯನ್ನು ಸಚಿವರು ನೀಡಬೇಕು ಎಂದು ಒತ್ತಾಯಿಸಿದರು. ಬೆಳಗ್ಗೆ 6 ಗಂಟೆಗೆ ಕಿಲೋಮೀಟರ್ ದೂರದ ಮನೆಯಿಂದ ಹೊರಡಬೇಕಾಗಿದ್ದು, ಸರಿಯಾದ ಸಮಯಕ್ಕೆ ಕೆಲಸದ ಸ್ಥಳಕ್ಕೆ ತಲುಪಲು ಕಷ್ಟವಾಗುತ್ತಿದೆ ಎಂದು ಮಹಿಳಾ ನೌಕರರು ಅಳಲು ತೋಡಿಕೊಂಡರು.
ಬಳಿಕ ಸಚಿವ ಕೈಲಾಶ್ ಗೆಹ್ಲೋಟ್, ಮಹಿಳಾ ನೌಕರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಮತ್ತು ಅವರಿಗೆ ಉತ್ತಮ ಕೆಲಸದ ವಾತಾವರಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಮಹಿಳಾ ನೌಕರರು ಪ್ರತಿಭಟನೆ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾದರು.
ಸರೋಜಿನಿ ನಗರದಲ್ಲಿರುವ ಮಹಿಳಾ ಬಸ್ ಡಿಪೋದಲ್ಲಿ ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ಇನ್ನಷ್ಟು ಉದ್ಯೋಗಗಳು ಸಿಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಆಂಧ್ರದಲ್ಲಿ ಓಡಾಡುವ ದೇಶದ ಎಲ್ಲ ಹಿರಿಯ ನಾಗರಿಕರಿಗೆ ಬಸ್ ಪ್ರಯಾಣ ದರದಲ್ಲಿ ಶೇ 25 ರಷ್ಟು ರಿಯಾಯಿತಿ