'ಫಾರೆಸ್ಟ್' ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ. ಟೈಟಲ್ ಹಾಗೂ ಸ್ಟಾರ್ ಕಾಸ್ಟ್ ವಿಚಾರವಾಗಿ 'ಫಾರೆಸ್ಟ್' ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ಹಾಸ್ಯನಟ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರಂಥ ಸ್ಟಾರ್ ಕಲಾವಿದರೇ ಅಭಿನಯಿಸಿರುವ ಮಲ್ಟಿ ಸ್ಟಾರರ್ ಚಿತ್ರ ಇದಾಗಿದೆ. ಫಾರೆಸ್ಟ್ನಲ್ಲಿ ನಡೆಯೋ ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್ ಅನ್ನು ಈ ಚಿತ್ರ ಒಳಗೊಂಡಿದೆ. ಬಹುತೇಕ ಕಥೆ ಕಾಡಿನಲ್ಲಿಯೇ ನಡೆಯೋದು ಚಿತ್ರದ ವಿಶೇಷ.
ಡಬಲ್ ಇಂಜಿನ್, ಬ್ರಹ್ಮಚಾರಿಯಂಥ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಿರುವ ಚಂದ್ರಮೋಹನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾಡಲ್ಲಿ ನಡೆಯುವ ಅಡ್ವೆಂಚರಸ್ ಕಾಮಿಡಿ ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಮೊದಲ ಪ್ರತಿ ಹೊರಬರಲಿದೆ. ಅತಿದೊಡ್ಡ ಕಳ್ಳತನವೊಂದರ ಸುತ್ತ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಅಲ್ಲದೇ ಚಿತ್ರದ ಮತ್ತೊಂದು ಹಾಡನ್ನು ಸದ್ಯದಲ್ಲೇ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚೇತನ್ ಕುಮಾರ್ ಬರೆದಿರುವ ಹಾಡಿಗೆ ಗಾಯಕ ಚಂದನ್ ಶೆಟ್ಟಿ ದನಿಯಾಗಿದ್ದಾರೆ.
ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಅಲ್ಲದೇ ಸತ್ಯಶೌರ್ಯ ಸಾಗರ್ ಸಂಭಾಷಣೆಯನ್ನೂ ಬರೆದಿದ್ದಾರೆ. ಆನಂದ್‌ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ರವಿಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಅರ್ಜುನ್ ಕಿಟ್ಟು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮಾ ಅವರ ಸಾಹಸ ನಿರ್ದೇಶನ ಈ ಫಾರೆಸ್ಟ್ ಚಿತ್ರಕ್ಕಿದೆ.