ಬೆಳಗಾವಿ : ಸಿ ಟಿ ರವಿ ಅವರು ಸಾಮಾನ್ಯ ಜನರಿಗೆ ಮಾದರಿ ಆಗಿರಬೇಕಿತ್ತು. ಆದರೆ, ನಮ್ಮ ತಾಯಿಗೆ ಅಷ್ಟೇ ಅಲ್ಲದೇ ಇಡೀ ಮಹಿಳಾ ಕುಲಕ್ಕೆ ಅವರು ಅಪಮಾನ ಮಾಡಿದ್ದಾರೆ. ಅವರು ಈ ರೀತಿ ಮಾತಾಡುತ್ತಾರೆ ಅಂತಾ ನಾನು ಅಂದುಕೊಂಡಿರಲಿಲ್ಲ. ಆದರೆ, ಅವರ ಮಾತಿನಿಂದ ಇವರ ಸಂಸ್ಕೃತಿ ಎಂಥದ್ದು ಅಂತಾ ಗೊತ್ತಾಗುತ್ತದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆಯೂ ಕೂಡ ಒಮ್ಮೆ ನಮ್ಮ ತಾಯಿ ಬಗ್ಗೆ ಮಾತಾಡಿದಾಗಲೂ ಬಿಜೆಪಿಯವರು ಸಮರ್ಥಿಸಿಕೊಂಡಿದ್ದರು. ಓರ್ವ ಮಹಿಳೆ ಬಗ್ಗೆ ಈ ರೀತಿ ಮಾತನಾಡಿದಾಗ ಅವರು ಖಂಡಿಸಬೇಕಿತ್ತು. ಆದರೆ, ಈಗ ಮತ್ತೆ ಮಾತನಾಡಿದಾಗಲೂ ಅವರು ಅದನ್ನು ಸಮರ್ಥಿಸಿಕೊಂಡಿದ್ದು ದುರಾದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಕ್ಷೇತ್ರದ ಜನರು ಸ್ವಇಚ್ಛೆಯಿಂದ ಇಂದು ಸಿ. ಟಿ ರವಿ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ನಮ್ಮ ಬೆಂಬಲಿಗರನ್ನು ನಾನು ಈಗಷ್ಟೇ ಭೇಟಿ ಮಾಡಿದ್ದೇನೆ ಎಂದು ಮೃಣಾಲ್ ಹೇಳಿದರು.
ಘಟನೆಯಿಂದ ನಮ್ಮ ತಾಯಿಯವರ ಮನಸ್ಸಿಗೆ ತುಂಬಾ ಬೇಜಾರಾಗಿದೆ. ಯಾವುದೇ ಮಹಿಳೆಗೆ ಈ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ಬೇಜಾರು ಆಗುವುದು ಸಹಜ. ನಿನ್ನೆ ಎರಡು ಗಂಟೆ ನಮ್ಮ ತಾಯಿ ಜೊತೆಗೆ ಕುಳಿತು ಅವರಿಗೆ ಧೈರ್ಯ ಹೇಳಿದ್ದೇನೆ. ನಮ್ಮ ಇಡೀ ಕುಟುಂಬ ಅವರ ಬೆನ್ನಿಗೆ ನಿಂತಿದೆ ಎಂದು ತಿಳಿಸಿದರು.
ಇಂಥ ಕಷ್ಟದ ಸಂದರ್ಭದಲ್ಲಿ ತಾಯಿ ಜೊತೆಗೆ ನಿಂತಿರುವ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.
ಮುಂದೆ ಪಕ್ಷದ ಮುಖಂಡರು, ಹಿರಿಯರ ಜೊತೆಗೆ ಚರ್ಚಿಸಿ ಯಾವ ರೀತಿ ಕಾನೂನು ಹೋರಾಟ ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.
ಸಿ.ಟಿ ರವಿ ವಿರುದ್ಧ ಸಿಡಿದೆದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳು : ವಿಧಾನಪರಿಷತ್ ಸದಸ್ಯ ಸಿ. ಟಿ. ರವಿ ಅವರ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ಸಿ. ಟಿ ರವಿ ಸದಸ್ಯತ್ವ ಅಮಾನತಿಗೆ ಆಗ್ರಹಿಸಿದರು.
ಬೆಳಗಾವಿಯ ಸಿಪಿಎಡ್ ಮೈದಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹೆಬ್ಬಾಳ್ಕರ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.
ಈ ವೇಳೆ ಮಾತನಾಡಿದ ತಾ. ಪಂ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, 'ವಿಧಾನಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ಸಿ. ಟಿ ರವಿ ನಿಂದಿಸಿದ್ದಾರೆ. ಕೂಡಲೇ ಬಿಜೆಪಿಯವರು ಅವರ ರಾಜೀನಾಮೆ ಪಡೆದು, ಪಕ್ಷದಿಂದ ಉಚ್ಛಾಟಿಸಬೇಕು. ಇಲ್ಲದಿದ್ದರೆ ದೇಶದಲ್ಲೇ ಬಿಜೆಪಿ ನಿರ್ಣಾಮ ಆಗುತ್ತದೆ' ಎಂದು ಎಚ್ಚರಿಸಿದರು.
ಮತ್ತೋರ್ವ ಮುಖಂಡ ಅಡಿವೇಶ ಇಟಗಿ ಮಾತನಾಡಿ, 'ರಾಜ್ಯದ ಏಕೈಕ ಮಹಿಳಾ ಮಂತ್ರಿ, ನಮ್ಮೆಲ್ಲರ ನಾಯಕಿ, ಸಹೋದರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಸಿ. ಟಿ ರವಿ ಬಳಸಿದ ಆ ಪದದಿಂದ ನಮಗೆ ಬಹಳಷ್ಟು ನೋವಾಗಿದೆ. ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ, ಭಗವದ್ಗೀತೆ ಬಗ್ಗೆ ಮಾತಾಡುವ ಬಿಜೆಪಿಯವರ ಸಂಸ್ಕೃತಿ ಇದೆನಾ?' ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡರಾದ ಅಂಜಲಿ ಪಾಟೀಲ್ ಮಾತನಾಡಿ, ಆ ರೀತಿ ಮಾತಾಡಿದ್ದು ನಮಗೆ ತುಂಬಾ ನೋವಾಗಿದೆ. ಭಾರತ್ ಮಾತಾ ಕೀ ಜೈ ಎನ್ನಲು ಸಿ. ಟಿ ರವಿ ಲಾಯಕ್ ಅಲ್ಲ. ನಿನ್ನೆ ಬಿಡುಗಡೆ ಆಗುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ವಿಜಯೋತ್ಸವ ಮಾಡಿದವರಿಗೆ ಮಹಿಳೆಯರ ಬಗ್ಗೆ ಸಹಾನುಭೂತಿ ಇಲ್ಲ. ಹಾಗಾಗಿ, ಇಂದು ನಾವು ಬೆಳಗಾವಿಯಲ್ಲಿ ಆತನ ಶವಯಾತ್ರೆ ಮಾಡಿದ್ದೇವೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಸಿ. ಟಿ ರವಿ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಬಳಿಕ ಸಿ. ಟಿ ರವಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಯುವರಾಜ ಖದಂ, ಕಲ್ಪನಾ ಜೋಶಿ, ಗುಂಡು ಪಾಟೀಲ ಸೇರಿ ಮತ್ತಿತರರು ಇದ್ದರು.