ವಿಜಯಪುರ/ಜತ್ತ: ಸಾಮಾನ್ಯ ಕುಟುಂಬದ ಯುವಕ ಎಂಜಿನಿಯರಿಂಗ್ ಪದವಿ ಪಡೆದು ಬೆಂಗಳೂರಿಗೆ ಬಂದು ಹಂತ ಹಂತವಾಗಿ ಮೇಲಕ್ಕೇರಿದ್ದರು. ಅಷ್ಟೇ ಅಲ್ಲ, ಸ್ವಂತ ಕಂಪನಿಯನ್ನೂ ಕಟ್ಟಿ ನೂರಾರು ಜನಕ್ಕೆ ಉದ್ಯೋಗವನ್ನೂ ನೀಡಿ ಯಶಸ್ವಿಯಾಗಿದ್ದರು. ಹಳ್ಳಿಯಲ್ಲಿದ್ದ ಪೋಷಕರು, ಸಂಬಂಧಿಕರಿಗೆ ಆಸರೆ ಆಗಿದ್ದರು. ಆದರೆ ವಿಧಿಯಾಟಕ್ಕೆ ಉದ್ಯಮಿ ಮತ್ತು ಇಡೀ ಕುಟುಂಬವೇ ಬಲಿಯಾಗಿದೆ.
ನೆಲಮಂಗಲ ಬಳಿ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಬಲಿಯಾದ ಉದ್ಯಮಿ ಚಂದ್ರಮ್ ಇಗಪ್ಪಗೋಳ ಮತ್ತು ಇಡೀ ಕುಟುಂಬದ ಕರುಣಾಜನಕ ಕಥೆ ಇದು. ಚಂದ್ರಮ್ ಇಗಪ್ಪಗೋಳ ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಮೊರಬಗಿ ಗ್ರಾಮದವರು. ಸದ್ಯ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದರು. ಕ್ರಿಸ್ಮಸ್ ಹಬ್ಬದ ರಜೆ ಹಿನ್ನೆಲೆಯಲ್ಲಿ ಚಂದ್ರಮ್ ಇಗಪ್ಪಗೋಳ ಅವರು ಪತ್ನಿ, ಇಬ್ಬರು ಮಕ್ಕಳು ಸೇರಿ ಕುಟುಂಬದ ಆರು ಜನರು ಸ್ವಗ್ರಾಮಕ್ಕೆ ತಮ್ಮ ವೋಲ್ವೋ ಕಾರಿನಲ್ಲಿ ತೆರಳುವಾಗ ಯಮನಂತೆ ಕಂಟೇನರ್ ಎದುರಾಗಿದೆ. ಕಾರಲ್ಲಿದ್ದ ಚಂದ್ರಮ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಸಹೋದರನ ಪತ್ನಿ, ಅವರ ಮಗ ಸೇರಿ ಆರು ಜನ ಸಾವನ್ನಪ್ಪಿದ್ದಾರೆ. ಚಂದ್ರಮ್ ಇಗಪ್ಪಗೋಳ (46), ಪತ್ನಿ ಧೋರಾಬಾಯಿ ಚಂದ್ರಮ್ ಇಗಪ್ಪಗೋಳ (40), ಧೀಕ್ಷಾ ಚಂದ್ರಮ್ ಇಗಪ್ಪಗೋಳ (10), ಗಣೇಶ್ ಇಗಪ್ಪಗೋಳ (16), ಆರ್ಯ ಚಂದ್ರಮ್ ಇಗಪ್ಪಗೋಳ (6) ಮತ್ತು ವಿಜಯಲಕ್ಷ್ಮಿ (36) ಮೃತಪಟ್ಟವರು.
ನೂರಾರು ಜನರಿಗೆ ಉದ್ಯೋಗದಾತ: ಚಂದ್ರಮ್ ಇಗಪ್ಪಗೋಳ 2004ರಲ್ಲಿ ಸೂರತ್ಕಲ್ ಎನ್ಐಟಿಯಿಂದ ಇಲೆಕ್ಟ್ರಿಕಲ್ಸ್ ಮತ್ತು ಇಲೆಕ್ಟ್ರಾನಿಕ್ಸ್ ನಲ್ಲಿ ಪದವಿ ಪಡೆದು, ಡಿಸೈನರ್ ಇಂಜಿನಿಯರ್ ಆಗಿ ವೃತ್ತಿ ಆರಂಭಿಸಿದ್ದರು. ಬಳಿಕ ಬೋಸ್, ಕೆಪಿಐಟಿ ಟೆಕ್ನಾಲಜಿಯಲ್ಲೂ ಸೇವೆ ಸಲ್ಲಿಸಿದ್ದರು. ನಂತರ 2018ರಲ್ಲಿ ಚೀನಾಗೆ ತೆರಳಿ ಗ್ರೇಟ್ ವಾಲ್ ಮೋಟಾರ್ ಕಂಪನಿಯ ಮುಖ್ಯ ಇಂಜನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಅದೇ ವರ್ಷ ವಾಪಸ್ ಬೆಂಗಳೂರಿಗೆ ಬಂದ ಅವರು, ಪತ್ನಿ ಗೌರಾಬಾಯಿ ಜೊತೆ ಸೇರಿ ಇಲ್ಲಿನ ಹೆಚ್ಎಸ್ಆರ್ ಲೇಔಟ್ನಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಆರಂಭಿಸಿದ್ದರು. ಕೇವಲ ಐವರು ಇಂಜಿನಿಯರ್ಗಳಿಂದ ಶುರು ಮಾಡಿದ ಸಂಸ್ಥೆಯಲ್ಲಿ ಇದೀಗ 150ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ಕೊಟ್ಟಿದ್ದಾರೆ. ಇತ್ತೀಚಿಗೆ ಕಂಪನಿಯ ಹೊಸ ಕಚೇರಿ ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದ್ದರು.
![ನೆಲಮಂಗಲ ಅಪಘಾತ](https://etvbharatimages.akamaized.net/etvbharat/prod-images/21-12-2024/23167907_chandu.jpg)
ಎರಡು ತಿಂಗಳ ಹಿಂದಷ್ಟೇ ವೋಲ್ವೋ ಕಾರು ಖರೀದಿ: ಯಶಸ್ವಿ ಉದ್ಯಮಿ ಬೆಳೆಯುತ್ತಿದ್ದ ಚಂದ್ರಮ್ ಅವರು ಕಳೆದ ಎರದು ತಿಂಗಳ ಹಿಂದಷ್ಟೇ ಲಕ್ಷಾಂತರ ರೂ. ಬೆಲೆಯ ವೋಲ್ವೋ ಕಾರು ಖರೀದಿಸಿ ಸಂಭ್ರಮಿಸಿದ್ದರು. ಈಗ ಅದೇ ಕಾರಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಗ್ರಾಮದಲ್ಲೇ ವಾಸವಿದ್ದ ತಂದೆ ಈರಗೊಂಡ, ತಾಯಿ ಜಕ್ಕವ್ವ ಅವರನ್ನು ಚಂದ್ರಮ್ ಅವರೇ ನೋಡಿಕೊಳ್ಳುತ್ತಿದ್ದರು.
![ನೆಲಮಂಗಲ ಅಪಘಾತ](https://etvbharatimages.akamaized.net/etvbharat/prod-images/21-12-2024/23167907_chanduaa.jpg)
ಚಂದ್ರಮ್ ಸಹೋದರಿ ಕಣ್ಣೀರು: ಟಿವಿಯಲ್ಲಿ ನೋಡಿದ ಬಳಿಕ ಅಪಘಾತದ ಸುದ್ದಿ ಗೊತ್ತಾಗಿದೆ. ಬೆಂಗಳೂರಲ್ಲಿ ದೊಡ್ಡ ಇಂಜಿನಿಯರ್ ಆಗಿ, ಕಂಪನಿ ಮಾಲೀಕನಾಗಿದ್ದ. ಕುಟುಂಬದ ಸದಸ್ಯರನ್ನೆಲ್ಲ ನೋಡಿಕೊಳ್ಳುತ್ತಿದ್ದ. ನಮ್ಮ ಅಜ್ಜನಿಗೆ ಆರೋಗ್ಯ ಸಮಸ್ಯೆ ಇದ್ದಾಗ ಕಳೆದ ವಾರ ಬಂದಿದ್ದರು ಎಂದು ಚಂದ್ರಮ್ ಸಹೋದರಿ ಗೌರವ್ವ ಕಣ್ಣೀರು ಹಾಕಿದರು.
ಗ್ರಾಮದಲ್ಲಿ ಮಡುಗಟ್ಟಿದ ದುಃಖ: ಚಂದ್ರಮ್ ಮತ್ತು ಕುಟುಂಬಸ್ಥರ ಸಾವಿನ ಹಿನ್ನೆಲೆ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಅಪಘಾತ: ಕಾರಿನ ಮೇಲೆ ಕಂಟೇನರ್ ಪಲ್ಟಿಯಾಗಿ ಉದ್ಯಮಿ ಸೇರಿ ಒಂದೇ ಕುಟುಂಬದ 6 ಜನ ಸಾವು