ಕರ್ನಾಟಕ

karnataka

ETV Bharat / entertainment

ಹುಟ್ಟೂರು ಬಿಡದಿಯ ತೋಟದಲ್ಲಿ ಕೆ.ಶಿವರಾಮ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ - K Shivaram

ಮಾಜಿ ಐಎಎಸ್ ಅಧಿಕಾರಿ ಹಾಗು ರಾಜಕಾರಣಿ ಬಿ.ಶಿವರಾಮ್‌ ನಿನ್ನೆ ನಿಧನ ಹೊಂದಿದ್ದು, ಹುಟ್ಟೂರು ಬಿಡದಿಯಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

K Shivaram's funeral
ಕೆ. ಶಿವರಾಮ್ ಅಂತ್ಯಸಂಸ್ಕಾರ

By ETV Bharat Karnataka Team

Published : Mar 1, 2024, 6:39 PM IST

ಬೆಂಗಳೂರು:ಹುಟ್ಟೂರು ಬಿಡದಿಯ ತೋಟದಲ್ಲಿ ಬಿ.ಶಿವರಾಂ ಅವರ ಮೃತದೇಹದ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ತಾಯಿಯ ಅಂತ್ಯಸಂಸ್ಕಾರ ನಡೆದ ಸ್ಥಳದ ಪಕ್ಕದಲ್ಲೇ ಮಗನ ಅಂತ್ಯಸಂಸ್ಕಾರ ನೆರವೇರಲಿದೆ. ಕೆಂಗೇರಿಯಲ್ಲಿರುವ ಛಲವಾದಿ ಸಭಾಂಗಣದ ಆವರಣದಲ್ಲಿ ಅಂತ್ಯಕ್ರಿಯೆ ಮಾಡಲು ರಾಜ್ಯ ಸರ್ಕಾರದ ಅನುಮತಿ ನೀಡದ ಕಾರಣ ಶಿವರಾಮ್ ಕುಟುಂಬಸ್ಥರು ಹಾಗೂ ಛಲವಾದಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ಹಾಗೂ ನಿವೃತ್ತ ಐಎಎಸ್​ ಅಧಿಕಾರಿ ಕೆ.ಶಿವರಾಮ್​ ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನ ನಡೆಯಿತು. ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಅಂತಿಮ ದರ್ಶನ ಪಡೆದರು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಸಾ.ರಾ ಗೋವಿಂದ್, ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್, ನಿರ್ದೇಶಕ ತರುಣ್ ಸುಧೀರ್, ನಿರ್ದೇಶಕ ಮದನ್ ಪಟೇಲ್, ನಟ ದುನಿಯಾ ವಿಜಯ್​, ರಾಜಕಾರಣಿಗಳಾದ ಡಿ.ಕೆ.ಸುರೇಶ್, ಪ್ರಿಯಾಂಕ್​ ಖರ್ಗೆ, ವಿಜಯೇಂದ್ರ, ಮಾಜಿ ಸಚಿವ ಹೆಚ್ ಆಂಜನೇಯ ಸೇರಿದಂತೆ ಸಾಕಷ್ಟು ಗಣ್ಯರು ಅಂತಿಮ ದರ್ಶನ ಪಡೆದರು.

ಈ ಸಂದರ್ಭದಲ್ಲಿ ನಿರ್ಮಾಪಕ ಸಾ.ರಾ.ಗೋವಿಂದ್ ಮಾತನಾಡಿ, ''ಕನ್ನಡದಲ್ಲಿ ಐಎಎಸ್​​ ಪರೀಕ್ಷೆ ಬರೆದು ಕನ್ನಡಿಗರ ಮನಸ್ಸು ಗೆದ್ದವರು ಶಿವರಾಮ್​. ನಾನು ಸುಮಾರು 50 ರಿಂದ 75 ಸಮಾರಂಭಗಳಲ್ಲಿ ಅವರನ್ನು ಗೌರವಿಸಿದ್ದೆ. 'ಬಾ ನಲ್ಲೆ ಮಧು ಚಂದ್ರಕೆ' ಸಿನಿಮಾದ ಸಬ್ಜೆಕ್ಟ್ ನನ್ನ ಬಳಿ ಇತ್ತು. ನಾಗತಿಹಳ್ಳಿ ಅವರು ಕೇಳಿದಾಗ ಬಿಟ್ಟುಕೊಟ್ಟಿದ್ದೆ. ಶಿವರಾಮ್​ ಅವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ'' ಎಂದು ಸಂತಾಪ ಸೂಚಿಸಿದರು.

ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ, ''ಶಿವರಾಮ್​ ಅವರು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಆನೇಕಲ್, ದಾವಣಗೆರೆ ಭಾಗಗಳಲ್ಲಿ ಬಡವರಿಗೆ ಸಾಕಷ್ಟು ನೆರವಾಗಿದ್ದಾರೆ. ಎಲ್ಲರಿಗೂ ಗೌರವ ಕೊಡುತ್ತಿದ್ದರು. ಇನ್ಮುಂದೆ ಅವರ ಪರವಾಗಿ ನನ್ನಿಂದ ಸಾಧ್ಯವಾಗುವ ಕಾರ್ಯಗಳನ್ನು ಮಾಡುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಹೇಳಿದರು.

ನಿರ್ದೇಶಕ ತರುಣ್ ಸುಧೀರ್ ಮಾತನಾಡಿ, ''ಮೂರು ವರ್ಷ ಅವರೊಟ್ಟಿಗೆ ಟ್ರಾವೆಲ್ ಮಾಡಿದ್ದೆ. ಟೈಗರ್ ಸಿನಿಮಾಗಾಗಿ ನಾನು ಕೆಲಸ ಮಾಡಿದ್ದೆ. ನನ್ನ ಸಹೋದರ ನಂದ ಅದನ್ನು ನಿರ್ದೇಶಿಸಿದ್ದ. ಶಿವರಾಮ್​​ ಅವರಿಗೆ ಬೇರೆ ಬೇರೆ ಲುಕ್ಸ್ ಟ್ರೈ ಮಾಡಿದ್ದೆವು. ಒಳ್ಳೆಯ ಪ್ರೊಡಕ್ಷನ್ ಹೌಸ್ ಮಾಡೋಣ ಅಂದಿದ್ದರು. ಇತ್ತೀಚೆಗೆ ಅವರೊಟ್ಟಿಗೆ ಮಾತನಾಡಿದ್ದೆ ಕೂಡ. ನಿಜಕ್ಕೂ ನೋವಾಗುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಕಂಬನಿ ಮಿಡಿದರು.

ಅಂತಿಮ ದರ್ಶನ ಪಡೆದು ಸಂಸದ ಡಿ.ಕೆ.ಸುರೇಶ್ ಮಾತನಾಡಿ, "ಶಿವರಾಮ್​​ ರಾಮನಗರದ ಉರಳ್ಳಿಗ್ರಾಮದಿಂದ ಬಂದ ಹಳ್ಳಿ ಪ್ರತಿಭೆ. ನಮ್ಮದು ಮೂವತ್ತು ವರ್ಷಗಳ ಪರಿಚಯ. ಸದಾ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದರು ಎಂದರು. ಇನ್ನೂ ಸಚಿವ ಪ್ರಿಯಾಂಕ್​ ಖರ್ಗೆ ಕೂಡ ಶಿವರಾಮ್​​ ಅಂತಿಮ ದರ್ಶನ ಪಡೆದರು. ಈ ವೇಳೆ ಶಿವರಾಮ್​ ಪತ್ನಿ ವಾಣಿ ಅಸಮಾಧಾನ ವ್ಯಕ್ತಪಡಿಸಿ, ಯಾಕೆ ಬಂದ್ರು ಅವರು?, ದಯವಿಟ್ಟು ಕಳುಹಿಸಿ" ಎಂದರು.

ಇದನ್ನೂ ಓದಿ:ಕೆಂಗೇರಿಯ ಛಲವಾದಿ ಮಹಾಸಭಾ ಆವರಣದಲ್ಲಿ ಕೆ.ಶಿವರಾಮ್​ ಅಂತ್ಯಕ್ರಿಯೆಗೆ ಆಗ್ರಹ

ಶಿವರಾಮ್ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಕುಟುಂಬಸ್ಥರು ನಿನ್ನೆಯಿಂದಲೇ ಸಚಿವ ಹೆಚ್.ಸಿ.ಮಹಾದೇವಪ್ಪ ಅವರಿಗೆ ಮನವಿ ಮಾಡಿದ್ದಾರೆ. ಆದರೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಕಾರಣ ಬೆಂಬಲಿಗರು ಹಾಗೂ ಛಲವಾದಿ ಮಹಾಸಭಾ ಸಂಘಟನೆಯವರು ಹಿರಿಯ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರನ್ನು ಅಡ್ಡಗಟ್ಟಿ ಕೆಂಗೇರಿಯಲ್ಲಿರುವ ಛಲವಾದಿ ಸಭಾಂಗಣ ಆವರಣದಲ್ಲಿ ಅಂತ್ಯಕ್ರಿಯೆ ಮಾಡಲು ಅನುಮತಿ ಕೊಡಿಸಿ ಎಂದು ಪ್ರತಿಭಟನೆ ಮಾಡಿದ್ದರು. ಮತ್ತೊಂದೆಡೆ ಸರ್ಕಾರದ ವತಿಯಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಆಕ್ರೋಶಗೊಂಡ ಛಲವಾದಿ ಸಂಘಟನೆಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರಾಜ್ಯ ಛಲವಾದಿ ಸಂಘಟನೆಯ ಸದಸ್ಯ ಹಂಸರಾಜ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ:ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಶಿವರಾಮ್​ ಅಂತಿಮ ದರ್ಶನ: ಚಿತ್ರರಂಗ, ರಾಜಕೀಯ ಗಣ್ಯರಿಂದ ಅಂತಿಮ ನಮನ

ನಟ ದುನಿಯಾ ವಿಜಯ್ ಹಾಗೂ ಶಿವರಾಮ್ ಅಳಿಯ ಪ್ರದೀಪ್ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದಿದ್ದಕ್ಕೆ ಮಾಧ್ಯಮದ ಮುಂದೆ ಬಂದು, ಸಿಎಂ ಸಿದ್ದರಾಮಯ್ಯ ಅವರಲ್ಲಿ ನೇರವಾಗಿ ಈ ವಿಚಾರ ತಿಳಿಸಿ ಛಲವಾದಿ ಸಮುದಾಯದವರು ಹಾಗೂ ರಾಜ್ಯದ ಜನತೆಯ ಬೇಡಿಕೆಯಂತೆ ಛಲವಾದಿ ಮಹಾಸಭಾಂಗಣದಲ್ಲಿ ಅಂತ್ಯಸಂಸ್ಕಾರ ಮಾಡಲು ಸರ್ಕಾರ ಆದೇಶ ಹೊರಡಿಸಲಿ ಎಂದು ಮನವಿ ಮಾಡಿಕೊಂಡರು. ಆದಾಗ್ಯೂ, ಶಿವರಾಮ್ ಕುಟುಂಬ ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ಸರ್ಕಾರ ಮಣಿದಿಲ್ಲ.

ABOUT THE AUTHOR

...view details