ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಗೇಮ್ ಚೇಂಜರ್'. ಇಂದು ನಟನ 39ನೇ ಹುಟ್ಟುಹಬ್ಬದ ಹಿನ್ನೆಲೆ ಚಿತ್ರದಿಂದ ಹಾಡೊಂದನ್ನು ಅನಾವರಣಗೊಳಿಸಲಾಗಿದೆ. ಜರಗಂಡಿ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವರ್ಣರಂಜಿತ ಮನೆಗಳು ಬ್ಯಾಗ್ರೌಂಡ್ನಲ್ಲಿದ್ದು, ರಾಮ್ ಚರಣ್ ನೇರಳೆ ಬಣ್ಣದ ಕುರ್ತಾ- ಪೈಜಾಮಾ ಧರಿಸಿರುವ ಪೋಸ್ಟರ್ ಸಹ ಚಿತ್ರನಿರ್ಮಾಪರು ರಿಲೀಸ್ ಮಾಡಿದ್ದಾರೆ. ಈ ಹಾಡನ್ನು ಕಳೆದ ವರ್ಷವೇ ಅನಾವರಣಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಸಾಂಗ್ ಲೀಕ್ ಆದ ಹಿನ್ನೆಲೆ, ವಿಳಂಬವಾಯ್ತು. ಇಂದು ನಟನ ಜನ್ಮದಿನವಾಗಿರುವುದರಿಂದ 'ಜರಗಂಡಿ' ಸಾಂಗ್ ರಿಲೀಸ್ ಆಗಿದೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್ನಲ್ಲಿ ಸಾಂಗ್ ಶೇರ್ ಮಾಡಿದ ನಾಯಕ ನಟ ರಾಮ್ ಚರಣ್, "ಜರಗಂಡಿ" ಎಂದು ಬರೆದುಕೊಂಡಿದ್ದಾರೆ. ಹಾಡು ತೆಲುಗು, ತಮಿಳು ಮತ್ತು ಹಿಂದಿ ಸೇರಿ ಮೂರು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಈ ನಿರ್ದಿಷ್ಟ ಹಾಡಿಗೆ ನಿರ್ದೇಶಕ ಶಂಕರ್ ಷಣ್ಮುಗಂ 90 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಶೇರ್ ಆಗಿರೋ ಲಿರಿಕಲ್ ವಿಡಿಯೋ ಸಾಂಗ್‌ನಲ್ಲಿ ಚಿತ್ರದ ನಾಯಕ ರಾಮ್ ಚರಣ್ ಮತ್ತು ನಾಯಕಿ ಕಿಯಾರಾ ಅಡ್ವಾಣಿ ಒಟ್ಟಿಗೆ ನೃತ್ಯ ಮಾಡಿರುವ ಕೆಲ ದೃಶ್ಯಗಳಿವೆ.
ಇದನ್ನೂ ಓದಿ:ತಿರುಪತಿಯಲ್ಲಿ ರಾಮ್ ಚರಣ್ ಮಗಳ ಫೇಸ್ ರಿವೀಲ್: ಫೋಟೋ - ವಿಡಿಯೋ ವೈರಲ್ - Ram Charan Daughter
ಎಸ್ ಥಮನ್ ಅವರ ಸಂಗೀತಕ್ಕೆ, ಅನಂತ ಶ್ರೀರಾಮ್ ಅವರ ಸಾಹಿತ್ಯವಿದೆ. ದಲೆರ್ ಮೆಹೆಂದಿ ಮತ್ತು ಸುನಿಧಿ ಚೌಹಾಣ್ ಹಾಡಿಗೆ ದನಿಯಾದರೆ, ಪ್ರಭುದೇವ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ಶಂಕರ್ ಷಣ್ಮುಗಂ ಶೈಲಿಯಲ್ಲಿ ಸಾಕಷ್ಟು ವರ್ಣರಂಜಿತವಾಗಿ ಚಿತ್ರೀಕರಿಸಲಾಗಿದೆ.
ಇದನ್ನೂ ಓದಿ:ನಟ ರಾಮ್ ಚರಣ್ ಜನ್ಮದಿನ: ಪತ್ನಿ, ಪುತ್ರಿಯೊಂದಿಗೆ ತಿರುಪತಿ ದೇಗುಲಕ್ಕೆ ಭೇಟಿ - Ram Charan
ಶಂಕರ್ ಬರೆದು ನಿರ್ದೇಶಿಸುತ್ತಿರುವ ಗೇಮ್ ಚೇಂಜರ್ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ರಾಮ್ ಚರಣ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇದೊಂದು ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ. ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ರಾಮ್ ಚರಣ್ಗೆ ಜೋಡಿಯಾಗಿದ್ದಾರೆ. ಅಂಜಲಿ, ಎಸ್‌ಜೆ ಸೂರ್ಯ, ಜಯರಾಮ್, ಸುನಿಲ್, ಶ್ರೀಕಾಂತ್, ಸಮುದ್ರಕನಿ ಮತ್ತು ನಾಸರ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಕಥೆಗೆ ಕೈ ಜೋಡಿಸಿದ್ದಾರೆ. ಚಿತ್ರವನ್ನು ದಿಲ್ ರಾಜು ಮತ್ತು ಶಿರಿಷ್ ಅವರು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿ ನಿರ್ಮಿಸುತ್ತಿದ್ದಾರೆ. ಗೇಮ್ ಚೇಂಜರ್ ಇದೇ ಸಾಲಿನ ದಸರಾ ಸಂದರ್ಭ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಮುಂದಿನ ತಿಂಗಳುಗಳಲ್ಲಿ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ.