ಇತ್ತೀಚಿನ ದಿನಗಳಲ್ಲಿ ಬಿಗ್ ಬಜೆಟ್ ಚಿತ್ರಗಳು ಎರಡು ಭಾಗಗಳಲ್ಲಿ ಮೂಡಿ ಬರುತ್ತಿವೆ. ಕಥೆಗೆ ಬೇಡಿಕೆ ಇದ್ದು, ಸೂಕ್ತ ಬಂಡವಾಳ ಸಿಕ್ಕರೆ ನಿರ್ದೇಶಕರು ಮೂರನೇ ಭಾಗಕ್ಕೂ ಮುಂದಾಗುತ್ತಾರೆ. ಅದರಂತೆ 'ಕೆಜಿಎಫ್ 3' ಪ್ರೊಜೆಕ್ಟ್ ಸಖತ್ ಸುದ್ದಿಯಲ್ಲಿದೆ. ಸಿನಿಮಾಗೆ ಸಿನಿಪ್ರಿಯರಿಂದ ಸಾಕಷ್ಟು ಬೇಡಿಕೆ ಇದೆ. ಈ ಪಟ್ಟಿಗೀಗ 'ಪುಷ್ಪ' ಕೂಡ ಸೇರಿಕೊಂಡಿದೆ. 2021ರ ಬ್ಲಾಕ್ಬಸ್ಟರ್ ಚಿತ್ರ 'ಪುಷ್ಪ: ದಿ ರೈಸ್'ನ ಮುಂದುವರಿದ ಭಾಗ 'ಪುಷ್ಪ 2: ದಿ ರೂಲ್' ಚಿತ್ರ ಬಿಡುಗಡೆ ಹೊಸ್ತಿಲಲ್ಲಿದ್ದು, 'ಪುಷ್ಪ 3' ಮಾಡಲು ಸಾಕಷ್ಟು ಸ್ಕೋಪ್ ಇದೆ ಎಂದು ಚಿತ್ರತಂಡ ಈಗಾಗಲೇ ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದೆ.
ಈ ವಿಚಾರದಲ್ಲಿ ಪುಷ್ಪ ತಂಡ ಬ್ಲಾಕ್ಬಸ್ಟರ್ 'ಕೆಜಿಎಫ್' ಸೂತ್ರವನ್ನು ಅನುಸರಿಸುತ್ತಿರುವಂತೆ ತೋರಿದೆ. 'ಕೆಜಿಎಫ್ 2' ನಂತರ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಾಯಕ ನಟ ಯಶ್ ಬೇರೆ ಪ್ರೊಜೆಕ್ಟ್ ಕಡೆ ಮುಖ ಮಾಡಿದರು. ನೀಲ್ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ 'ಸಲಾರ್-2'ನಲ್ಲಿ ಬ್ಯುಸಿಯಾಗಿದ್ದು, ನಂತರ ಜೂ. ಎನ್ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಕೆಜಿಎಫ್ ಬಳಿಕ ಅವರ ಸಲಾರ್ 1 ರಿಲೀಸ್ ಆಗಿ ಯಶ ಕಂಡಿದೆ. ಇನ್ನೂ ಯಶ್ ತಮ್ಮ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರೀಕರಣ ಪೂರ್ಣಗೊಳಿಸಬೇಕಿದೆ. ಇದೆಲ್ಲದರ ನಂತರ 'ಕೆಜಿಎಫ್ 3' ಸಾಧ್ಯತೆ ಇದೆ. ಇದು ಕನಿಷ್ಠ ಮೂರು ವರ್ಷಗಳನ್ನು ತೆಗೆದುಕೊಳ್ಳಬಹುದು. ಇದರ ಮಧ್ಯೆ ಯಶ್ ಬೇರೆ ಪ್ರೊಜೆಕ್ಟ್ಗೆ ಒಪ್ಪಿಗೆ ನೀಡಿದರೆ ಇನ್ನೂ ತಡವಾಗಬಹುದು.
ಇದೇ ಸೂತ್ರವನ್ನು 'ಪುಷ್ಪ 3' ವಿಷಯದಲ್ಲೂ ಅಳವಡಿಸಿದಂತೆ ತೋರುತ್ತಿದೆ. 'ಪುಷ್ಪ 2' ಬಿಡುಗಡೆಯಾದ ತಕ್ಷಣ 'ಪುಷ್ಪ 3' ಶುರುವಾಗುವುದಿಲ್ಲ. ಪುಷ್ಪರಾಜ್ ಅಲ್ಲು ಅರ್ಜುನ್ ಬೇರೆ ನಿರ್ದೇಶಕರ ಜೊತೆ ಎರಡು ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬುದು ಟಾಲಿವುಡ್ ಟಾಕ್. ಅಟ್ಲಿ ಜೊತೆಗಿನ ಸಿನಿಮಾದ ಚರ್ಚೆಯೂ ನಡೆದಿದೆ ಎನ್ನಲಾಗುತ್ತಿದೆ. ಆದರೆ, ಈವರೆಗೆ ಅಧಿಕೃತ ಘೋಷಣೆ ಚಿತ್ರತಂಡದಿಂದ ಬಂದಿಲ್ಲ. ಅಲ್ಲದೇ ಈ ಹಿಂದೆ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುವುದಾಗಿ ಅಲ್ಲು ಅರ್ಜುನ್ ತಿಳಿಸಿದ್ದರು. ತಿವಿಕ್ರಂ ಕೂಡ ಕಥೆ ಸಿದ್ಧಪಡಿಸುತ್ತಿದ್ದಾರೆ. 'ಪುಷ್ಪ'ದಲ್ಲಿ ಕಂಪ್ಲೀಟ್ ಮಾಸ್ ಹೀರೋ ಆಗಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್, 'ಅಲ ವೈಕುಂಠಪುರಮಲೋ' ರೀತಿ ಕ್ಲಾಸಿಯಾಗಿ ಕಾಣುವಂತ ಕಥೆ, ಪಾತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.