ನವದೆಹಲಿ: ದೈನಂದಿನ ಜೀವನದಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನದ ಬಗೆಗಿನ ಚರ್ಚೆ ಮುಂದುವರೆದಿದ್ದು, ಎಷ್ಟು ಹೆಚ್ಚು ಅವಧಿಗೆ ಕೆಲಸ ಮಾಡುತ್ತೀರಿ ಎನ್ನುವುದಕ್ಕಿಂತಲೂ ಎಷ್ಟು ಚೆನ್ನಾಗಿ (ಗುಣಮಟ್ಟ) ಕೆಲಸ ಮಾಡುತ್ತೀರಿ ಎಂಬುದು ಮುಖ್ಯ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಿಇಒ ಅದಾರ್ ಪೂನಾವಾಲಾ ಹೇಳಿದ್ದಾರೆ.
ದೇಶದಲ್ಲಿ ಇಂಥದೊಂದು ಚರ್ಚೆಯನ್ನು ಮೊದಲ ಬಾರಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹುಟ್ಟು ಹಾಕಿದ್ದರು. ತೀರಾ ಇತ್ತೀಚೆಗೆ ಇದೇ ವಿಷಯದ ಬಗ್ಗೆ ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್ & ಟಿ) ಅಧ್ಯಕ್ಷ ಎಸ್.ಎನ್.ಸುಬ್ರಮಣ್ಯನ್ ಮಾತನಾಡಿದ ನಂತರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ವಾರಕ್ಕೆ ಕನಿಷ್ಠ 70 ತಾಸು ಕೆಲಸ ಮಾಡಬೇಕೆಂದು ಮೂರ್ತಿ ಹೇಳಿದ್ದರೆ, ಇನ್ನೊಂದು ಹೆಜ್ಜೆ ಮುಂದೆ ಹೋದ ಸುಬ್ರಮಣ್ಯನ್, ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಉದ್ಯೋಗಿಗಳು ವಾರಕ್ಕೆ 90 ತಾಸು ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು.
ಸದ್ಯ ಈ ಚರ್ಚೆ ಮುಂದುವರಿಸಿರುವ ಪೂನಾವಾಲಾ, "ಯಾವಾಗಲೂ ಕೆಲಸದ ಪ್ರಮಾಣಕ್ಕಿಂತ ಕೆಲಸದ ಗುಣಮಟ್ಟವೇ ಮುಖ್ಯವಾಗಿರುತ್ತದೆ" ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಭಾವನೆಗೆ ಪೂರಕವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಪೂನಾವಾಲಾ "ಹೌದು ಆನಂದ್ ಮಹೀಂದ್ರಾ ಅವರೇ, ನನ್ನ ಪತ್ನಿ ನತಾಶಾ ಪೂನಾವಾಲಾ ಕೂಡ ನಾನು ಅದ್ಭುತ ಎಂದು ಭಾವಿಸುತ್ತಾರೆ. ಭಾನುವಾರದಂದು ಆಕೆ ನನ್ನನ್ನು ನೋಡುವುದನ್ನು ಇಷ್ಟಪಡುತ್ತಾರೆ." ಎಂದು ಹೇಳಿದ್ದಾರೆ.
ವಾರಕ್ಕೆ 48, 70 ಅಥವಾ 90 ಗಂಟೆಗಳ ಕಾಲ ಕೆಲಸ ಮಾಡುವ ವಿಚಾರ ಮುಖ್ಯವಲ್ಲ. ಬದಲಿಗೆ ಮಾಡಿದ ಕೆಲಸ ಎಷ್ಟು ಗುಣಮಟ್ಟದ್ದಾಗಿತ್ತು ಎಂಬುದು ಮುಖ್ಯ ಎಂಬ ಮಹೀಂದ್ರಾ ಅವರ ಇತ್ತೀಚಿನ ಹೇಳಿಕೆಯನ್ನು ಪೂನಾವಾಲಾ ಬೆಂಬಲಿಸಿದಂತಾಗಿದೆ.
"ನನ್ನ ಹೆಂಡತಿ ಅದ್ಭುತವಾಗಿದ್ದಾಳೆ, ನಾನು ಅವಳನ್ನು ದಿಟ್ಟಿಸಲು ಇಷ್ಟಪಡುತ್ತೇನೆ" ಎಂದಿದ್ದ ಮಹೀಂದ್ರಾ, ಎಲ್ &ಟಿ ಅಧ್ಯಕ್ಷರ ಇತ್ತೀಚಿನ ಹೇಳಿಕೆಗಳನ್ನು ಟೀಕಿಸಿದ್ದರು.
ಇತ್ತೀಚೆಗೆ ಹೇಳಿಕೆ ನೀಡಿದ್ದ ಸುಬ್ರಮಣ್ಯನ್, ತಾವು ಅಧ್ಯಕ್ಷರಾಗಿರುವ ಎಲ್ &ಟಿ ಉದ್ಯೋಗಿಗಳು ಭಾನುವಾರದಂದು ಕೆಲಸ ಮಾಡದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದರು. "ನಾನು ನಿಮ್ಮನ್ನು ಭಾನುವಾರದಂದು ಕೆಲಸ ಮಾಡಿಸಲು ಸಾಧ್ಯವಾದರೆ ನನಗೆ ಬಹಳ ಖುಷಿಯಾಗುತ್ತದೆ. ಏಕೆಂದರೆ ನಾನು ಕೂಡ ಭಾನುವಾರ ಕೆಲಸ ಮಾಡುತ್ತೇನೆ" ಎಂದು ಅವರು ಹೇಳಿದ್ದರು.
"ನೀವು ಮನೆಯಲ್ಲಿ ಕುಳಿತು ಮಾಡುವುದಾದರೂ ಏನು? ಅದೆಷ್ಟು ಹೊತ್ತು ಹೆಂಡತಿಯನ್ನು ನೋಡುತ್ತಾ ಮನೆಯಲ್ಲಿ ಕುಳಿತುಕೊಳ್ಳುವಿರಿ? ಹೆಂಡತಿಯರು ಕೂಡ ತಮ್ಮ ಗಂಡಂದಿರನ್ನು ಎಷ್ಟು ಕಾಲ ನೋಡುತ್ತಾ ಇರಬಲ್ಲರು? ಅದೆಲ್ಲ ಬಿಟ್ಟು ಕಚೇರಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ." ಎಂಬ ಸುಬ್ರಮಣ್ಯನ್ ಅವರ ಹೇಳಿಕೆ ತೀವ್ರ ವಿವಾದಕ್ಕೀಡಾಗಿತ್ತು.
ಆರೋಗ್ಯ ತಜ್ಞರ ಪ್ರಕಾರ, ಅತಿಯಾಗಿ ಕೆಲಸ ಮಾಡುವುದರಿಂದ ಬರ್ನ್ ಔಟ್ ಅಪಾಯ ಹೆಚ್ಚಾಗುತ್ತದೆ ಮತ್ತು ಕೆಲಸದಲ್ಲಿ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಅತಿಯಾದ ಕೆಲಸದಿಂದ ವೈಯಕ್ತಿಕ ಜೀವನ ಮತ್ತು ಕುಟುಂಬ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು ಮತ್ತು ನಿದ್ರೆಯ ಚಕ್ರದ ಮೇಲೂ ಪರಿಣಾಮ ಬೀರಬಹುದು. ಇದರಿಂದ ಖಿನ್ನತೆ, ಆತಂಕ ಮತ್ತು ಒತ್ತಡದ ಅಪಾಯಗಳು ಕಾಣಿಸಿಕೊಳ್ಳಬಹುದು. ಇವೆಲ್ಲವೂ ಹೃದಯಾಘಾತ, ಪಾರ್ಶ್ವವಾಯು ಮತ್ತು ಅಕಾಲಿಕ ಸಾವಿನ ಅಪಾಯವನ್ನು ಹೆಚ್ಚಿಸಬಹುದು.
ಇದನ್ನೂ ಓದಿ: ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೇ ಅಗ್ರಸ್ಥಾನ - TOP INDIAN CITY FOR WORKING WOMEN