ಬೆಂಗಳೂರು: ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷವನ್ನು ಮುಗಿಸಬೇಕೆಂದು ಕಾಂಗ್ರೆಸ್ ಹೊಂಚು ಹಾಕುತ್ತಿದೆ. ಯಾವುದೇ ಕಾರಣಕ್ಕೂ ಆ ಕನಸು ಈಡೇರುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ತಿಳಿಸಿದರು.
ಜೆಡಿಎಸ್ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ನಮ್ಮದು ಸಮರ್ಥ ನಾಯಕರ, ಸಮರ್ಥ ಕಾರ್ಯಕರ್ತರ ಪಕ್ಷ. ನಮ್ಮ ಪಕ್ಷವನ್ನು ಬೇರೆಯವರು ಮುಗಿಸುವುದು ಅಸಾಧ್ಯ. ಮಾರ್ಚ್ ತಿಂಗಳಿಂದ ನಾನು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ, ಕಾರ್ಯಕರ್ತರ ಮನೆಗಳಲ್ಲಿಯೇ ವಾಸ್ತವ್ಯ ಹೂಡಿ ಪಕ್ಷ ಕಟ್ಟುತ್ತೇನೆ. ಸದಸ್ಯತ್ವ ಅಭಿಯಾನವನ್ನು ನೀವು ಮುಂದುವರಿಸಿ ಎಂದು ಕರೆ ನೀಡಿದರು.
ಕುಮಾರಸ್ವಾಮಿ ಅವರನ್ನು ಮುಗಿಸಿದರೆ ಜೆಡಿಎಸ್ ಮುಗಿದು ಹೋಗುತ್ತದೆ ಎಂದು ಕಾಂಗ್ರೆಸ್ ನಂಬಿದೆ. ಆದರೆ ಅದು ಸಾಧ್ಯವಿಲ್ಲ. ಏಕೆಂದರೆ, ಕುಮಾರಸ್ವಾಮಿ ಅವರ ಹಿಂದೆ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಅವರು ಬಲಿಷ್ಠವಾಗಿ ನಿಂತಿದ್ದಾರೆ. ಹೀಗಾಗಿ ಅವರನ್ನು ಮುಗಿಸುವುದು ಸಾಧ್ಯವಿಲ್ಲದ ಮಾತು ದೇವೇಗೌಡರು ಖಡಕ್ ಸಂದೇಶ ರವಾನಿಸಿದರು.
ಕಾಂಗ್ರೆಸ್ ಪಕ್ಷದ ಕಚೇರಿಗಳ ಗೋಡೆಗಳನ್ನೊಮ್ಮೆ ನೋಡಿ : ಜೆಡಿಎಸ್ ಕುಟುಂಬ ಆಧಾರಿತ ಪಕ್ಷ ಎಂದು ಕಾಂಗ್ರೆಸ್ ಹೇಳುತ್ತದೆ. ಯಾರಾದರೂ ಒಮ್ಮೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗಿ, ಅಲ್ಲಿ ಗೋಡೆಗಳ ಮೇಲೆ ನೇತು ಹಾಕಿರುವ ಫೋಟೋಗಳನ್ನು ಒಮ್ಮೆ ನೋಡಿ. ಕುಟುಂಬ ಆಧಾರಿತ ಪಾರ್ಟಿ ಯಾವುದು ಎನ್ನುವುದು ಗೊತ್ತಾಗುತ್ತದೆ ಎಂದು ಮಾಜಿ ಪ್ರಧಾನಿ ಗುಡುಗಿದರು.
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಹಿಂದೆ ಬೀಳುವುದು ಬೇಡ. ಎಲ್ಲರೂ ಒಟ್ಟಾಗಿ ಪಕ್ಷ ವಹಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ: ಜೆ.ಪಿ. ಭವನದಲ್ಲಿ ಇಂದು ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಜೊತೆಗೆ ಪಕ್ಷದ ಸಂಘಟನೆ ಕುರಿತು ಚರ್ಚಿಸಲಾಯಿತು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ಆಗಿಲ್ಲ. ಪಕ್ಷದ ದ್ವೈವಾರ್ಷಿಕ ಸಾಂಸ್ಥಿಕ ಚುನಾವಣೆ, ಸದಸ್ಯತ್ವ ಅಭಿಯಾನ ಚುರುಕುಗೊಳಿಸುವುದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ತಯಾರಿ ಹಾಗೂ ಪಕ್ಷ ಸಂಘಟನೆ ವಿಷಯಗಳ ಬಗ್ಗೆ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಚುನಾವಣೆ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ : ಹೆಚ್.ಡಿ. ಕುಮಾರಸ್ವಾಮಿ
ಇದನ್ನೂ ಓದಿ: ಬೈದ್ಯನಾಥನ ದರ್ಶನ ಪಡೆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ:'ದೇಶದ ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥನೆ'