ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ನಾಗ್ಪುರದಲ್ಲಿ ಕಂಗನಾ ರನೌತ್ ಮತ್ತು ಅನುಪಮ್ ಖೇರ್ ಅಭಿನಯದ 'ಎಮರ್ಜೆನ್ಸಿ' ಚಲನಚಿತ್ರ ವೀಕ್ಷಿಸಿದರು. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ಚಿತ್ರದ ವಿಶೇಷ ಸ್ಕ್ರೀನಿಂಗ್ನ ಕೆಲ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಗಡ್ಕರಿ, ಕಂಗನಾ ಮತ್ತು ಖೇರ್ ಪರಸ್ಪರ ಮಾತನಾಡುತ್ತಿರುವುದನ್ನು ಒಂದು ಚಿತ್ರದಲ್ಲಿ ಕಾಣಿಸುತ್ತದೆ.
"ಜನವರಿ 17ರಂದು ಬಿಡುಗಡೆಯಾಗಲಿರುವ ಎಮರ್ಜೆನ್ಸಿ ಚಿತ್ರದ ಪ್ರದರ್ಶನದಲ್ಲಿ ನಿತಿನ್ ಜಿ ಅವರೊಂದಿಗೆ" ಎಂದು ಕಂಗನಾ ತಮ್ಮ ಪೋಸ್ಟ್ಗೆ ಶೀರ್ಷಿಕೆ ಬರೆದಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವ ಗಡ್ಕರಿ, ನಮ್ಮ ರಾಷ್ಟ್ರದ ಇತಿಹಾಸದ ಕರಾಳ ಅಧ್ಯಾಯವನ್ನು ಸತ್ಯಾಸತ್ಯತೆ ಮತ್ತು ಉತ್ಕೃಷ್ಟತೆಯೊಂದಿಗೆ ಪ್ರಸ್ತುತಪಡಿಸಿದ್ದಕ್ಕಾಗಿ ಎಮರ್ಜೆನ್ಸಿ ಚಿತ್ರ ತಂಡವನ್ನು ಶ್ಲಾಘಿಸುವುದಾಗಿ ಹೇಳಿದ್ದಾರೆ.
Joined the special screening of the movie Emergency, featuring @KanganaTeam Ji and Shri @AnupamPKher Ji, in Nagpur today. I wholeheartedly thank the filmmakers and actors for presenting the dark chapter of our nation's history with such authenticity and excellence. I urge… pic.twitter.com/a6S0f5Q5bG
— Nitin Gadkari (@nitin_gadkari) January 11, 2025
"ಇಂದು ನಾಗ್ಪುರದಲ್ಲಿ ಟೀಂ ಕಂಗನಾ ಮತ್ತು ಅನುಪಮ್ ಖೇರ್ ಅಭಿನಯದ 'ಎಮರ್ಜೆನ್ಸಿ' ಚಲನಚಿತ್ರದ ಪ್ರದರ್ಶನದಲ್ಲಿ ಭಾಗಿಯಾಗಿದ್ದೆ. ನಮ್ಮ ರಾಷ್ಟ್ರದ ಇತಿಹಾಸದ ಕರಾಳ ಅಧ್ಯಾಯವನ್ನು ಇಷ್ಟೊಂದು ಸತ್ಯಾಸತ್ಯತೆ ಮತ್ತು ಉತ್ಕೃಷ್ಟತೆಯೊಂದಿಗೆ ಪ್ರಸ್ತುತಪಡಿಸಿದ ಚಲನಚಿತ್ರ ನಿರ್ಮಾಪಕರು ಮತ್ತು ನಟರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಭಾರತದ ಇತಿಹಾಸದಲ್ಲಿನ ಮಹತ್ವದ ಅವಧಿಯೊಂದನ್ನು ಚಿತ್ರಿಸುವ ಈ ಚಿತ್ರವನ್ನು ಎಲ್ಲರೂ ನೋಡಬೇಕೆಂದು ನಾನು ಕರೆ ನೀಡುತ್ತೇನೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಖೇರ್ ಮತ್ತು ಕಂಗನಾ ಅಭಿನಯದ ಚಿತ್ರ 'ಎಮರ್ಜೆನ್ಸಿ' ಜನವರಿ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಶ್ರೇಯಸ್ ತಲ್ಪಾಡೆ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ನಟಿಸಿದ್ದಾರೆ. ಇತ್ತೀಚೆಗೆ, ಕಂಗನಾ ಮತ್ತು ಖೇರ್ ಇಬ್ಬರೂ ಎಎನ್ಐ ಜೊತೆ ಚಲನಚಿತ್ರ ನಿರ್ಮಾಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. 1975ರಿಂದ 1977ರವರೆಗೆ 21 ತಿಂಗಳ ಕಾಲ ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಮತ್ತು ದೇಶದಲ್ಲಿ ಅದರಿಂದಾದ ಪರಿಣಾಮಗಳ ಬಗ್ಗೆ ಸಿನಿಮಾದಲ್ಲಿ ಚಿತ್ರಿಸಲಾಗಿದೆ.
ಚಿತ್ರದ ಬಗ್ಗೆ ಮಾತನಾಡಿದ ಕಂಗನಾ, "ಚಿತ್ರ ನಿರ್ಮಾಣದಲ್ಲಿ ಅನುಪಮ್ ಖೇರ್ ಅವರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಖೇರ್ ಅವರನ್ನು ಚಿತ್ರದ ನಿಜವಾದ ಹೀರೋ ಎಂದು ಕರೆದ ಕಂಗನಾ, ಖೇರ್ ಕೈ ಜೋಡಿಸದಿದ್ದರೆ ಚಿತ್ರ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ" ಎಂದು ಹೇಳಿದರು.
"ಈ ಚಿತ್ರದಲ್ಲಿ ಅನುಪಮ್ ಜಿ ಇರುವುದು ನನಗೆ ಬಹಳ ಮುಖ್ಯವಾಗಿತ್ತು. ಅವರು 'ಎಮರ್ಜೆನ್ಸಿ' ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಲು ನಿರಾಕರಿಸಿದ್ದರೆ, ಈ ಚಿತ್ರ ಮಾಡಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಚಿತ್ರದಲ್ಲಿ ಅವರ ವ್ಯಕ್ತಿತ್ವವನ್ನು ನೋಡಿ... ಅವರ ಮುಖದಲ್ಲಿ ಪ್ರಾಮಾಣಿಕತೆ ಕಾಣಿಸುತ್ತದೆ. ಜಯಪ್ರಕಾಶ್ ನಾರಾಯಣ್ ಅವರ ಪಾತ್ರವನ್ನು ಖೇರ್ ಹೊರತುಪಡಿಸಿದರೆ ಬೇರಾರೂ ಮಾಡಲು ಸಾಧ್ಯವಿಲ್ಲ" ಎಂದು ಕಂಗನಾ ಹೇಳಿದರು.
ಇದನ್ನೂ ಓದಿ: ಭಾರತ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ - REPUBLIC DAY CHIEF GUEST