ಹುಬ್ಬಳ್ಳಿ:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆಯ ಸತ್ಯಾಸತ್ಯತೆ ಬಂದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಈಗ ನಾನು ಏನು ಹೇಳಲ್ಲ. ಸರ್ಕಾರ ಈ ಕುರಿತು ಕ್ರಮ ಕೈಗೊಂಡು ರೇಣುಕಾಸ್ವಾಮಿ ತಂದೆ, ತಾಯಿ ಹಾಗೂ ಪತ್ನಿಗೆ ನ್ಯಾಯ ಒದಗಿಸಿಕೊಡಲಿ ಎಂದು ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ 'ಗೌರಿ' ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.
"ಶಿವಮೊಗ್ಗದಲ್ಲಿ ನಾನು ದರ್ಶನ್ಗೆ ಯಾವುದೇ ಟಾಂಗ್ ಕೊಟ್ಟಿಲ್ಲ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗ ಅದರ ಬಗ್ಗೆ ಮಾತನಾಡುವುದು ಬೇಡ. ಪೊಲೀಸ್ ಉತ್ತಮ ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ತನಿಖೆ ನಂತರ ಉತ್ತರ ಸಿಗಲಿದ್ದು, ಆಗ ನಿಮಗೆ ಗೊತ್ತಾಗುತ್ತದೆ, ಎಂದಷ್ಟೇ ನಾನು ಹೇಳಿದ್ದು. ನಂತರ ಮಾಧ್ಯಮಗೋಷ್ಟಿಯಲ್ಲಿ ಮಾರ್ಮಿಕವಾಗಿ ಬಸವಣ್ಣನವರ ವಚನ ಹೇಳಿದ್ದೆ. ನಾನೂ ದರ್ಶನ್ ಜೊತೆ ಎರಡು ಸಿನಿಮಾ ಮಾಡಿದ್ದೇನೆ. ನಾನ್ಯಾಕೆ ಅವರಿಗೆ ಟಾಂಗ್ ಕೊಡಲಿ. ಒಬ್ಬ ಸಿನಿಮಾ ನಿರ್ದೇಶಕನಾಗಿ, ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಪತ್ರಕರ್ತನಾಗಿ ಕೆಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೆ ಅಷ್ಟೇ. ಅದು ಬಿಟ್ಟರೆ ನಮ್ಮ ನಡುವೆ ಏನೂ ಇಲ್ಲ. ಅನ್ಯಾಯ ಆದಾಗ ಧ್ವನಿ ಎತ್ತುವ, ಪ್ರಶ್ನೆ ಮಾಡುವುದನ್ನು ನಮ್ಮ ತಂದೆ ಲಂಕೇಶ್ ಅವರು ಹೇಳಿಕೊಟ್ಟಿದ್ದಾರೆ. ನನ್ನ ಮಗನ ಚೊಚ್ಚಲ ಸಿನಿಮಾಗೆ ವಿಜಯಲಕ್ಷ್ಮಿ ಅವರು ಶುಭ ಹಾರೈಸಿದ್ದರು. ವಿಜಯಲಕ್ಷ್ಮಿ ಹಾಗೂ ಅವರ ಮಗನಿಗೆ ದೇವರು ಶಕ್ತಿ ಕೊಡಲಿ. ರೇಣುಕಾಸ್ವಾಮಿ ಅವರ ಕುಟುಂಬಕ್ಕೂ ನ್ಯಾಯ ಸಿಗಬೇಕು" ಎಂದು ಹೇಳಿದರು.
"ಸುದ್ದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಮಾಧ್ಯಮ ಇರುವುದರಿಂದಲೇ ಈಗ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿದೆ. ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಪತ್ರಕರ್ತರು ತಮ್ಮ ಕರ್ತವ್ಯ ಮಾಡುವ ವೇಳೆ ಇಂತಹ ಘಟನೆಗಳು ನಡೆಯುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ" ಎಂದರು.