ಕಲೈಪುಲಿ ಎಸ್ ತನು ಅವರ ವಿ ಕ್ರಿಯೇಷನ್ಸ್ ಹಾಗೂ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿ ಬಂದ "ಮ್ಯಾಕ್ಸ್" ಡಿಸೆಂಬರ್ 25ರಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಬಹುನಿರೀಕ್ಷಿತ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕನಾಗಿ ಕಾಣಿಸಿಕೊಂಡಿದ್ದು, ಸಿನಿಮಾ ಬಹುತೇಕ ಮೆಚ್ಚುಗೆಯನ್ನೇ ಗಳಿಸಿದೆ. ಅಲ್ಲದೇ ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದೆ. ಈ ಸಂತೋಷವನ್ನು ಸಂಭ್ರಮಿಸಲು ಇತ್ತೀಚೆಗೆ 'ಥ್ಯಾಂಕ್ಸ್ ಗಿವಿಂಗ್' ಸಮಾರಂಭ ಆಯೋಜಿಸಲಾಗಿತ್ತು.
ಅಭಿಮಾನಿಗಳ ಗೆಲುವೇ ನನ್ನ ಗೆಲುವು :ಕಿಚ್ಚ ಸುದೀಪ್ ಮಾತನಾಡಿ, ಎರಡೂವರೆ ವರ್ಷಗಳ ಬಳಿಕ ನನ್ನ ಸಿನಿಮಾ ಬಿಡುಗಡೆಯಾಗಿ, ಯಶಸ್ಸು ಕಂಡಿದೆ. ಅಭಿಮಾನಿಗಳ ಹಾಗೂ ಚಿತ್ರತಂಡದವರ ಮುಖದಲ್ಲಿ ಗೆಲುವಿನ ನಗು ಮೂಡಿದೆ. ಆ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ. ನಾನು ಸದ್ಯ ಈ ಯಶಸ್ಸಿನ ಖುಷಿಯನ್ನು ಅನುಭವಿಸುತ್ತಿದ್ದೇನೆ ಎಂದು ಹರ್ಷ ಹಂಚಿಕೊಂಡರು.
ತಮಿಳಿನಲ್ಲೂ ಅದ್ಬುತ ಪ್ರದರ್ಶನ ಕಾಣುತ್ತಿದೆ :ಮಾತು ಮುಂದುವರಿಸಿದ ಅಭಿನಯ ಚಕ್ರವರ್ತಿ, ಪ್ರೀಕ್ವೆಲ್, ಸೀಕ್ವೆಲ್ ಯಾವುದರ ಬಗ್ಗೆಯೂ ಸದ್ಯಕ್ಕೆ ಗಮನ ಹರಿಸಿಲ್ಲ. ನಿರ್ದೇಶಕ ರಾಜಮೌಳಿ ಅವರು ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಅದು ಇನ್ನಷ್ಟು ಖುಷಿಯ ಸಂಗತಿ. ತಮಿಳಿನಲ್ಲಿಯೂ ಅದ್ಭುತ ಪ್ರದರ್ಶನ ಕಾಣುತ್ತಿದೆ. ನಿರ್ಮಾಪಕರು, ನಿರ್ದೇಶಕರು ಅಲ್ಲಿಯವರೇ ಆಗಿರುವುದರಿಂದ ಅವರ ಮುಖದಲ್ಲಿ ಖುಷಿ ಕಾಣುತ್ತಿದೆ. ನಟನಾಗಿ ನನಗೂ ಹೆಮ್ಮೆ ಇದೆ. ತಮಿಳಿನಲ್ಲಿ ಕಲಾವಿದರು ಸಹ ಚಿತ್ರ ವೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.
ಸ್ನೇಹಿತರ ಬಳಗ ಹೆಚ್ಚಾಗಿದೆ :'ಮ್ಯಾಕ್ಸ್' ಚಿತ್ರದ ಯಶಸ್ಸಿನ ನಂತರ ನನ್ನ ಸ್ನೇಹಿತರ ಬಳಗ ಇನ್ನಷ್ಟು ಹೆಚ್ಚಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬಳಸಲಾಗಿದ್ದ ಕಾಸ್ಟ್ಯೂಮ್ ಎತ್ತಿಟ್ಟಿದ್ದೇನೆ. ಅದು ನೆನಪು. ಪ್ರತೀ ಸಿನಿಮಾದಲ್ಲಿಯೂ ಈ ರೀತಿ ಮಾಡುವ ಅಭ್ಯಾಸವಿದೆ ಎಂದರು.