ಬೆಂಗಳೂರು: ಆಸ್ತಿ ಖರೀದಿ ಮಾಡುವವರು ಸ್ವಲ್ಪ ಯಾಮಾರಿದರೂ ಸಮಸ್ಯೆಗೆ ಸಿಲುಕುವುದು ನಿಶ್ಚಿತ. ಮುಖ್ಯವಾಗಿ ರಾಜಧಾನಿ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಭಾರಿ ಜಾಗೃತರಾಗಿರಬೇಕು. ಆಸ್ತಿ ಖರೀದಿ ಮಾಡುವ ವೇಳೆ ದಾಖಲೆ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿಯೇ ವ್ಯವಹಾರದಲ್ಲಿ ಮುಂದುವರೆಯುವುದು ಅತ್ಯಗತ್ಯ. ಪ್ರಮುಖವಾಗಿ ಆಸ್ತಿ ದಾಖಲೆಗಳನ್ನು ಎ ಹಾಗೂ ಬಿ ಖಾತಾ ಎಂದು ವಿಂಗಡಿಸಲಾಗಿದೆ. ಖರೀದಿಸಲು ಉದ್ದೇಶವಿರುವ ಆಸ್ತಿ ಯಾವ ಖಾತಾದಡಿ ಇದೆ ಎಂಬುದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ. ಎ ಮತ್ತು ಬಿ ಖಾತೆಗಳ ನಡುವೆ ಇರುವ ವ್ಯತ್ಯಾಸವೇನು?, ಯಾವ ಖಾತೆ ಇದ್ದರೆ ಒಳ್ಳೆಯದು ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಖಾತಾ ವ್ಯವಸ್ಥೆ : ಬೆಂಗಳೂರಿನ ಆಸ್ತಿ ತೆರಿಗೆ ಸಂಗ್ರಹವನ್ನು ಸರಳಗೊಳಿಸಲು 2007 ರಲ್ಲಿ ಖಾತಾ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದು ಬೆಂಗಳೂರಿನಲ್ಲಿರುವ ಆಸ್ತಿಯ ಮಾಲೀಕತ್ವದ ವಿವರಗಳನ್ನು ಮೌಲ್ಯೀಕರಿಸುವ ಕಾನೂನು ದಾಖಲೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ನೀಡಲಾದ ಖಾತಾ ಪ್ರಮಾಣಪತ್ರವು ಆಸ್ತಿಯ ಗಾತ್ರ, ಪ್ರದೇಶ, ಸ್ಥಳ ಮತ್ತು ಪ್ರಕಾರದ (ವಸತಿ ಅಥವಾ ವಾಣಿಜ್ಯ) ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತದೆ.
ಏನಿದು ಎ ಖಾತಾ? ಖಾತಾ ಪ್ರಮಾಣ ಪತ್ರ ಆಸ್ತಿಯು ಸಂಬಂಧಪಟ್ಟ ಸಂಸ್ಥೆಗಳಿಂದ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ಪಡೆದುಕೊಂಡಿದ್ದರೆ ಮತ್ತು ಕಟ್ಟಡ ಬೈಲಾಗಳು, ಆಸ್ತಿ ತೆರಿಗೆ ಸೇರಿದಂತೆ ನಿಗದಿತ ಮಾನದಂಡಗಳಿಗೆ ಅನುಸಾರವಾಗಿ ನಿರ್ಮಿಸಲಾಗಿದ್ದರೆ ಅದನ್ನು ಕಾನೂನುಬದ್ಧವಾಗಿದೆ ಎಂದು ಮೌಲ್ಯೀಕರಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಆಸ್ತಿಯು ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದರೆ, ಅವುಗಳನ್ನು ಎ ಖಾತಾ ಎಂದು ವರ್ಗೀಕರಿಸಲಾಗುತ್ತದೆ.
ಬಿ ಖಾತಾ ಅಂದ್ರೆ? ಆಸ್ತಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳು, ಬಡಾವಣೆಗಳು ಅಥವಾ ಕಂದಾಯ ನಿವೇಶನಗಳನ್ನು ಮಹಾನಗರ ಪಾಲಿಕೆ ಬಿ ಖಾತಾ ಎಂದು ವರ್ಗೀಕರಿಸಿದೆ. ಆದರೆ, ಬಿ ಖಾತಾ ಹೊಂದಿರುವ ಆಸ್ತಿಗಳೆಲ್ಲ ಸಂಪೂರ್ಣ ಕಾನೂನುಬಾಹಿರ ಎಂದು ಹೇಳಲಾಗುವುದಿಲ್ಲ. ನಿರ್ದಿಷ್ಟ ಆಸ್ತಿಯ ಅಥವಾ ಕಟ್ಟಡದ ಕನ್ವರ್ಷನ್ ಪ್ರಕ್ರಿಯೆಯಲ್ಲಿ, ನಿರ್ಮಾಣದಲ್ಲಿ ಅಥವಾ ಇತರ ಯಾವುದೇ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದ್ದರೆ ಬಿ ಖಾತಾ ನೀಡಲಾಗುತ್ತದೆ.
ಬಿ ಖಾತಾ ಹೊಂದಿರುವ ಆಸ್ತಿ, ಕಟ್ಟಡಗಳು ಸಹ ಬಿಬಿಎಂಪಿಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ನಾಗರಿಕ ಶುಲ್ಕಗಳು ಮತ್ತು ತೆರಿಗೆಗಳ ಪಾವತಿಯ ಹೊರತಾಗಿಯೂ ಸಂಪೂರ್ಣವಾಗಿ ಕಾನೂನುಬದ್ಧವಲ್ಲದ ಆಸ್ತಿಯೇ ಬಿ ಖಾತಾ ಎಂದು ಹೇಳಲಾಗುತ್ತದೆ.
ನಿರ್ಮಾಣದ ವೇಳೆ ಕಟ್ಟಡದ ಬೈಲಾಗಳನ್ನು ಉಲ್ಲಂಘಿಸುವುದು, ಕಂದಾಯ ಭೂಮಿಯಲ್ಲಿ ನಿರ್ಮಾಣ, ಅನಧಿಕೃತ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣ, ಪೂರ್ಣಗೊಳಿಸುವಿಕೆ ಅಥವಾ ವಿತರಣೆ ಪ್ರಮಾಣಪತ್ರಗಳ ಕೊರತೆ ಇದ್ದಲ್ಲಿ ಅಂತಹ ಆಸ್ತಿಗೆ ಬಿ ಖಾತಾ ಪ್ರಮಾಣ ಪತ್ರ ನೀಡಲಾಗುತ್ತದೆ.
ಎ ಮತ್ತು ಬಿ ಖಾತಾ ಗುರುತಿಸುವುದೇಗೆ? ಮಹಾನಗರ ಪಾಲಿಕೆ ಬೆಂಗಳೂರಿನ ಪ್ರತಿಯೊಂದು ಆಸ್ತಿಗೂ ಖಾತಾ ಪ್ರಮಾಣಪತ್ರ ನೀಡುತ್ತದೆ. ಹಾಗಾಗಿ, ಆಸ್ತಿ ದಾಖಲೆಗಳಲ್ಲಿಯೂ ಖಾತಾ ಯಾವುದು ಎಂಬುದು ನಮೂದಾಗಿರುತ್ತದೆ. ಇನ್ನೊಂದೆಡೆ, ಎ ಖಾತಾ ಹಾಗೂ ಬಿ ಖಾತಾಗೆ ಬಿಬಿಎಂಪಿ ರಿಜಿಸ್ಟರ್ ಅನ್ನು ನಿರ್ವಹಿಸುತ್ತಿದೆ. ಹೀಗಾಗಿ ಆಸ್ತಿ ಇರುವ ವಾರ್ಡ್ ಮತ್ತು ಮಾಹಿತಿಯೊಂದಿಗೆ ಮಹಾನಗರ ಪಾಲಿಕೆಯಿಂದಲೂ ಖಾತಾ ವಿವರ ತಿಳಿದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾತಾ ಪರಿವರ್ತನೆ ಮಾಡಲು ಅವಕಾಶವಿದೆಯೇ? ಇನ್ನು ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ಆತಂಕಪಡುವ ಅಗತ್ಯವಿಲ್ಲ. ನಿರ್ದಿಷ್ಟ ನಿಯಮಗಳ ಅನುಸಾರ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಕೂಡ ಮಹಾನಗರ ಪಾಲಿಕೆ ಅವಕಾಶ ನೀಡುತ್ತದೆ. ಆದರೆ, ಇದು ಬಿ ಖಾತಾ ಆಸ್ತಿಯಲ್ಲಿ ಎಷ್ಟು ಪ್ರಮಾಣದಲ್ಲಿ ನಿಯಮಮಗಳ ಉಲ್ಲಂಘನೆಯಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿರ್ದಿಷ್ಟ ಪ್ರಮಾಣದ ನಿಯಮ ಉಲ್ಲಂಘನೆಗೆ ದಂಡ ಪಾವತಿಸಿ, ನಂತರ ನಿಯಮಗಳನ್ನು ಪಾಲಿಸುವ ಮೂಲಕ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಬಿಬಿಎಂಪಿ ಅವಕಾಶ ನೀಡಿದೆ.
ಇತ್ತೀಚೆಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, 'ಬಿಬಿಎಂಪಿಯಲ್ಲಿ ಸುಮಾರು 15 ಲಕ್ಷ ಆಸ್ತಿಗಳು ಖಾತಾ ದಾಖಲೆಗಳನ್ನು ಹೊಂದಿಲ್ಲ. ಇದರಿಂದ ತೆರಿಗೆಯನ್ನೂ ಕಟ್ಟದ ಕಾರಣ ಸಾವಿರಾರು ಕೋಟಿ ರೂ. ತೆರಿಗೆ ಪ್ರತಿ ವರ್ಷ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾತಾ ನೀಡಿರುವುದನ್ನು ಡಾಟಾ ಬೇಸ್‌ನಲ್ಲಿ ಹಾಕಬೇಕು. ಇದರಿಂದ ಖಾತೆ ಆದ ಆಸ್ತಿಗಳನ್ನು ಮಾತ್ರ ನೋಂದಣಿ ಮಾಡಬಹುದು. ಕಾಗದ ದಾಖಲೆಗಳ ಆಧಾರದಲ್ಲಿ ಯಾವುದೇ ಕಾರಣಕ್ಕೂ ನೋಂದಣಿಗೆ ಪರಿಗಣಿಸಬಾರದು. ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿಯಾನದ ಮಾದರಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ನಡೆಸಲು ಸೂಚನೆ ನೀಡಿದ್ದು, ಫೆಬ್ರವರಿ 10ರ ಒಳಗಾಗಿ ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು' ಎಂದು ಸಿಎಂ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಆಸ್ತಿ ಮಾಲೀಕತ್ವ - ದಸ್ತಾವೇಜುಗಳ ನೋಂದಣಿ ಮಾಡಿಸುವುದು ಹೇಗೆ ?
ಇದನ್ನೂ ಓದಿ: ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ