ಕಟಕ್ (ಒಡಿಶಾ) : ಇಲ್ಲಿನ ನುವಾಪಾದ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಮತ್ತು ಗರಿಯಾಬಂಧ್‌ನಲ್ಲಿ ತಡರಾತ್ರಿ ಹಾಗೂ ಮುಂಜಾನೆ ಒಡಿಶಾ ಮತ್ತು ಛತ್ತೀಸ್‌ಗಢ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 16 ನಕ್ಸಲರು ಹತರಾಗಿದ್ದಾರೆ.
ಕಾರ್ಯಾಚರಣೆಯ ವೇಳೆ ಅಪಾರ ಪ್ರಮಾಣದ ಬಂದೂಕುಗಳು, 1 ಎಸ್‌ಎಲ್‌ಆರ್ ಸೇರಿದಂತೆ ಮದ್ದುಗುಂಡುಗಳು ಮತ್ತು ಐಇಡಿಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮುಂಜಾನೆ ಹೊಸದಾಗಿ ಮತ್ತೆ ಗುಂಡಿನ ಚಕಮಕಿ ನಡೆದಿದ್ದು, 16ಕ್ಕೂ ಹೆಚ್ಚು ನಕ್ಸಲೀಯರು ಸಾವನ್ನಪ್ಪಿದ್ದಾರೆ. ಹತ್ಯೆಯಾದ ನಕ್ಸಲೀಯರಲ್ಲಿ, ನಕ್ಸಲೀಯ ಕೇಂದ್ರ ಸಮಿತಿಯ ಹಿರಿಯ ಸದಸ್ಯ ಜಯರಾಮ್ ಅಲಿಯಾಸ್ ಚಲಪತಿ ಕೂಡ ಸೇರಿದ್ದು, ಆತನ ತಲೆಯ ಮೇಲೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲೀಯರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಕೋಬ್ರಾ ಜವಾನ್ ಗಾಯಗೊಂಡರು ಎಂದು ಅಧಿಕಾರಿ ತಿಳಿಸಿದ್ದಾರೆ. ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಛತ್ತೀಸ್‌ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಯ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರದೇಶದಲ್ಲಿ ಪೊಲೀಸರಿಂದ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಒಡಿಶಾದ ನುವಾಪಾದ ಜಿಲ್ಲೆಯ ಗಡಿಯಿಂದ ಕೇವಲ 5 ಕಿಲೋ ಮೀಟರ್ ದೂರದಲ್ಲಿರುವ ಛತ್ತೀಸ್‌ಗಢದ ಕುಲಾರಿಘಾಟ್ ಮೀಸಲು ಅರಣ್ಯದಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲರು ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.
ಖಚಿತ ಮಾಹಿತಿಯ ಮೇರೆಗೆ ಛತ್ತೀಸ್‌ಗಢ ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ಇ-30 ಪಡೆಗಳೊಂದಿಗೆ ಎಸ್‌ಒಜಿ (ಒಡಿಶಾ ಪೊಲೀಸ್) ಸಿಬ್ಬಂದಿ ಜಂಟಿ ಅಂತಾರಾಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.
ಇದನ್ನೂ ಓದಿ : ಛತ್ತೀಸ್ಗಢದಲ್ಲಿ ಭದ್ರತಾ ಸಿಬ್ಬಂದಿಯಿಂದ ಎನ್ಕೌಂಟರ್: 12 ನಕ್ಸಲರ ಹತ್ಯೆ - NAXALS KILLED IN ENCOUNTER
ನಕ್ಸಲ್ ಮುಕ್ತ ಭಾರತವೇ ನಮ್ಮ ಗುರಿ ಎಂದ ಅಮಿತ್ ಶಾ: ಈ ಕಾರ್ಯಾಚರಣೆ ಕುರಿತಂತೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ನಕ್ಸಲಿಸಂಗೆ ಮತ್ತೊಂದು ಪ್ರಬಲ ಹೊಡೆತ ಎಂದು ಬಣ್ಣಿಸಿದ್ದಾರೆ. ನಕ್ಸಲಿಸಂ ಇಂದು ಕೊನೆಯುಸಿರೆಳೆದಿದೆ ಮತ್ತು ನಕ್ಸಲ್ ಮುಕ್ತ ಭಾರತ ಮತ್ತು ಭದ್ರತಾ ಪಡೆಗಳ ಜಂಟಿ ಪ್ರಯತ್ನಗಳ ಸಂಕಲ್ಪವಾಗಿದೆ ಎಂದು ಅವರು ಹೇಳಿದ್ದಾರೆ.