ಮಂಡಿ (ಹಿಮಾಚಲ ಪ್ರದೇಶ):ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಬಾಲಿವುಡ್ ಅಭಿನೇತ್ರಿ ಕಂಗನಾ ರಣಾವತ್ ಇಂದು ತಮ್ಮ ಮತ ಚಲಾಯಿಸಿದ್ದಾರೆ.
ಇಂದು ಲೋಕಸಭಾ ಚುನಾವಣೆಯ ಕೊನೆಯ ಘಟ್ಟ. ಈಗಾಗಲೇ ಆರು ಹಂತಗಳ ಚುನಾವಣೆ ಜರುಗಿದೆ. ಶನಿವಾರ ಕೊನೆಯ, ಏಳನೇ ಹಂತದ ಮತದಾನ ಪ್ರಕ್ರಿಯೆ ಜರುಗುತ್ತಿದೆ. 57 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಮಂಡಿ ಬಿಜೆಪಿ ಅಭ್ಯರ್ಥಿ ತಮ್ಮ ಹಕ್ಕು ಚಲಾಯಿಸಿ, ಪ್ರತಿಯೊಬ್ಬರೂ "ಪ್ರಜಾಪ್ರಭುತ್ವದ ಹಬ್ಬ"ದಲ್ಲಿ ಪಾಲ್ಗೊಳ್ಳುವಂತೆ, ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಒತ್ತಾಯಿಸಿದರು. ಬಳಿಕ ಮಂಡಿ ಬಿಜೆಪಿ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು.
ಹಿಮಾಚಲ ಪ್ರದೇಶದ ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿರುವ ಜೊತೆಗೆ ಹಿಮಾಚಲದಲ್ಲಿ ಸಂಪೂರ್ಣವಾಗಿ "ಮೋದಿ ಅಲೆ" ಇದೆ ಎಂದು ತಿಳಿಸಿದ್ದಾರೆ. ಬಳಿಕ ಮತದಾನ ಮಾಡುವಂತೆ ಮತದಾರರನ್ನು ಒತ್ತಾಯಿಸಿದ ಕಂಗನಾ, "ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಮತದಾನದ ಈ ಹಕ್ಕನ್ನು ಚಲಾಯಿಸಲು ಸಾಕಷ್ಟು ರಕ್ತಪಾತ ನಡೆದಿದೆ, ಹಾಗಾಗಿ ಇಂದು ನಾವು ನಮ್ಮ ಹಕ್ಕು ಚಲಾಯಿಸುತ್ತಿದ್ದೇವೆ" ಎಂದು ಹೇಳಿದರು.
"ಹಿಮಾಚಲ ಪ್ರದೇಶದಲ್ಲಿ ಸಂಪೂರ್ಣ ಮೋದಿ ಅಲೆ ಇದೆ. ನಮ್ಮ ಪ್ರಧಾನಿ ಸುಮಾರು 200 ರ್ಯಾಲಿಗಳನ್ನು ನಡೆಸಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಕನಿಷ್ಠ 80-90 ಸಂದರ್ಶನಗಳನ್ನು ನೀಡಿದ್ದಾರೆ" ಎಂದು ತಿಳಿಸಿದರು. 2024ರ ಲೋಕಸಭೆ ಚುನಾವಣೆಯ ಬಿಜೆಪಿ ಸ್ಲೋಗನ್ "400 ಪಾರ್" ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಕಂಗನಾ, "ನಾವು ಪ್ರಧಾನಿ ಮೋದಿಯ ಸೈನಿಕರು, ಹಿಮಾಚಲ ಪ್ರದೇಶದ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆಲ್ಲುತ್ತೇವೆ" ಎಂದು ತಿಳಿಸಿದರು.