ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬರುತ್ತಿರುವ ಸಿನಿಮಾ 'ಕನ್ನಡ ಮಾಧ್ಯಮ'. ಸಾಹಿತಿ ದೊಡ್ಡರಂಗೇಗೌಡ, ನಾಗೇಂದ್ರ ಅರಸ್ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ವಾಣಿ ಮತ್ತು ಚಿನ್ಮಯ್ ಅಭಿನಯದ ಈ ಚಿತ್ರದ ಫಸ್ಟ್ ಲುಕ್ ಅನ್ನು ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅನಾವರಣಗೊಳಿಸಿದರು.
ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ಎಲ್ಲಿ ಕನ್ನಡ ಅಲ್ಲಿ ದೊಡ್ಡರಂಗೇಗೌಡರು. ಕನ್ನಡದ ಯಾವುದೇ ಕಾರ್ಯ ಇರಲಿ, ಸಮಾರಂಭ ಇರಲಿ, ಗೀತೆ ಪ್ರಸ್ತುತಿಯಿರಲಿ.... ಅಲ್ಲಿ ನಾನು ಪಾಲ್ಗೊಳ್ಳಲು ಮುಖ್ಯ ಕಾರಣವೇ ಕನ್ನಡ. ಕನ್ನಡವೇ ನನ್ನ ಉಸಿರು, ಕನ್ನಡವೇ ನನ್ನ ಬದುಕು, ಕನ್ನಡವೇ ನನ್ನ ಹೆಸರು, ಕನ್ನಡವೇ ನನ್ನ ಬೆಳಕು ಕೂಡ. ವಿಧಾನಸೌಧದಲ್ಲಿ ಮೊದಲು ಕನ್ನಡ ಬಳಕೆ ಪ್ರಾರಂಭವಾಗಬೇಕು. ಎಷ್ಟೋ ಅಧಿಕಾರಿಗಳು ಕನ್ನಡವನ್ನು ಬಳಸುವುದಿಲ್ಲ. ನಾನು ಆಶಾವಾದಿ. ನನ್ನಲ್ಲಿ ಆಶಾ ಕಿರಣವಿದೆ. ಕನ್ನಡ ಇಂದಲ್ಲ ನಾಳೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಕನ್ನಡ ನಮ್ಮೆಲ್ಲರ ಚೈತ್ಯನವಾಗಲಿ. ಉಸಿರಾಗಲಿ. ಕನ್ನಡ ಮಾಧ್ಯಮ ಸಿನಿಮಾದಲ್ಲಿ ಈ ಎಲ್ಲ ಅಂಶಗಳು ಇರಲಿ. ಕನ್ನಡ ಸಮಸ್ಯೆಗಳ ಕೈಪಿಡಿಯಂತೆ ಚಿತ್ರ ಇರಲಿ ಎಂದು ಹೇಳಿದರು.
ನಿರ್ದೇಶಕ ಅಖಿಲ್ ಪುತ್ತೂರು ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಎರಡು ಹಾಡುಗಳಿವೆ. ಜನಗಳಿಗೆ ಗೊತ್ತಿಲ್ಲದ ಒಂದಷ್ಟು ವಿಷಯಗಳನ್ನು ನಮ್ಮ ಈ ಚಿತ್ರದ ಮೂಲಕ ತಿಳಿಸುತ್ತೇವೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತೇವೆ. ನಾನು ಯೋಧನಾಗಿ ಪಾತ್ರ ನಿರ್ವಹಿಸಲಿದ್ದೇನೆ ಎಂದು ತಿಳಿಸಿದರು.