ಕನ್ನಡದ ಬಹುನಿರೀಕ್ಷಿತ ಹಾಸ್ಯಮಯ ಚಿತ್ರ 'ಪೌಡರ್' ಬಿಡುಗಡೆಗೆ ಸಜ್ಜಾಗಿದೆ. ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದಿದ್ದ ಚಿತ್ರತಂಡ ಸದ್ಯ ಟ್ರೇಲರ್ ಅನಾವರಣಗೊಳಿಸಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಬೆಂಗಳೂರಿನಲ್ಲಿಂದು ಚಿತ್ರತಂಡ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಜನಾರ್ಧನ್ ಚಿಕ್ಕಣ್ಣ ನಿರ್ದೇಶನವಿರುವ ಈ ಸಿನಿಮಾದಲ್ಲಿ ದಿಗಂತ್ ಮಂಚಾಲೆ, ಧನ್ಯಾ ರಾಮ್ಕುಮಾರ್ ಜೊತೆಗೆ ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪೌಡರ್ ಒಂದರ ಸುತ್ತ ಹೆಣೆದಿರುವ ಕಥೆ ಇದಾಗಿದ್ದು, ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಯುವಕರು ಒಂದು 'ಪೌಡರ್' ಪ್ರಭಾವಕ್ಕೊಳಗಾಗಿ ಶ್ರೀಮಂತರಾಗಲು ಮಾಡುವ ಪ್ರಯತ್ನಗಳು, ಎದುರಾಗುವ ಸವಾಲು, ಅಡೆತಡೆಗಳು ಎಲ್ಲವನ್ನೂ ಎಳೆ ಎಳೆಯಾಗಿ ಚಿತ್ರದಲ್ಲಿ ಬಿಚ್ಚಿಡಲಾಗಿದೆ. ಕೊನೆಗೆ ಏನಾಗುತ್ತದೆ? ಸವಾಲುಗಳನ್ನು ಮೆಟ್ಟಿ ನಿಲ್ಲುವರೇ? ಅವರ ಕನಸುಗಳು ನನಸಾಗುವುದೇ? ಎಂಬುದೇ ಚಿತ್ರದ ಕಥೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೌಡರ್ ಟ್ರೇಲರ್ನ ಪೋಸ್ಟರ್ ಹಂಚಿಕೊಂಡ ನಾಯಕ ನಟ ದಿಗಂತ್ ಮಂಚಾಲೆ, 'ಇದು ಟ್ಯಾಲ್ಕಮ್ ಪೌಡರ್ ಅಲ್ಲ. ಆ ಪೌಡರು. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಪೌಡರ್ ಟ್ರೇಲರ್ ಅನಾವರಣಗೊಂಡಿದೆ. ಟ್ರೇಲರ್ ವೀಕ್ಷಿಸಿ, ನಕ್ಕು ನಲಿಯಿರಿ. 2024ರ ಆಗಸ್ಟ್ 23ಕ್ಕೆ ಪೌಡರ್ ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ' ಎಂದು ಬರೆದುಕೊಂಡಿದ್ದಾರೆ. ಸಿನಿಮಾದ ಹಿಂದಿರುವ ಕೆಆರ್ಜಿ ಸ್ಟುಡಿಯೋಸ್ ಕೂಡಾ ಟ್ರೇಲರ್ ಪೋಸ್ಟರ್ ಹಂಚಿಕೊಂಡು ಹೀಗೆ ಬರೆದುಕೊಂಡಿದೆ.
ದಿಗಂತ್, ಧನ್ಯಾ, ಶರ್ಮಿಳಾ ಜೊತೆಗೆ ಅನಿರುದ್ಧ್ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ರಂಗಾಯಣ ರಘು, ರವಿಶಂಕರ್ ಗೌಡ, ನಾಗಭೂಷಣ್ ಸೇರಿದಂತೆ ಅನೇಕರು ಚಿತ್ರದಲ್ಲಿ ಪಾತ್ರ ವಹಿಸಿದ್ದಾರೆ. ಯೋಗಿ ಜಿ.ರಾಜ್, ವಿಜಯ್ ಸುಬ್ರಹ್ಮಣ್ಯಂ, ಕಾರ್ತಿಕ್ ಗೌಡ ಅವರು ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ಅಡಿ ಮತ್ತು ಅರುನಭ್ ಕುಮಾರ್ ಅವರು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ನಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ:ಚಿತ್ರಮಂದಿರಗಳಿಗೆ ಪ್ರೇಕ್ಷಕರು ಯಾಕೆ ಬರಬೇಕು?: ನಟ ಕಿರಣ್ ರಾಜ್ ಕೊಟ್ಟ ಉತ್ತರ ಹೀಗಿದೆ - Come To Theatres
ಈ ಮೊದಲು ಆಗಸ್ಟ್ 15ರ ಸ್ವಾತಂತ್ಯ ದಿನಾಚರಣೆಯಂದು 'ಪೌಡರ್' ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿತ್ತು. ಆದ್ರೆ ಸ್ವಾತಂತ್ರ್ಯ ದಿನಾಚರಣೆಯಂದು ಕನ್ನಡ ಮಾತ್ರವಲ್ಲದೇ ಬಹುಭಾಷೆಯ ಹಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು, ಭರ್ಜರಿ ಪ್ರಚಾರ ಸಾಗಿದೆ. ಸ್ಯಾಂಡಲ್ವುಡ್ ಸದ್ದು ಮಾಡುತ್ತಿಲ್ಲ, ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ, ಸೂಪರ್ ಸ್ಟಾರ್ಸ್ ಸಿನಿಮಾ ಸಂಖ್ಯೆ ಇಳಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದ್ರೀಗ ಒಂದಾದ ಬಳಿಕ ಒಂದರಂತೆ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಒಂದೇ ದಿನ ತೆರೆಕಂಡು ಗಲ್ಲಾಪೆಟ್ಟಿಗೆ ಘರ್ಷಣೆಗೊಳಗಾಗುವುದರಿಂದ 'ಪೌಡರ್' ತಂಡ ಹಿಂದೆ ಸರಿದಿದೆ. ಗಲ್ಲಾಪೆಟ್ಟಿಗೆ ಘರ್ಷಣೆ ತಪ್ಪಿಸೋ ನಿಟ್ಟಿನಲ್ಲಿ ತನ್ನ ಬಿಡುಗಡೆ ದಿನಾಂಕವನ್ನು ಕೆಆರ್ಜಿ ಸಂಸ್ಥೆ ಮುಂದೂಡಿದೆ. ಆಗಸ್ಟ್ 15ರ ಬದಲಿಗೆ ಆಗಸ್ಟ್ 23ಕ್ಕೆ ಸಿನಿಮಾವನ್ನು ಬಿಡುಗಡೆಗೊಳಿಸಲು ತಂಡ ನಿರ್ಧರಿಸಿದೆ.
ಇದನ್ನೂ ಓದಿ:'ನಾನು ಭೂಮಿ ಮೇಲಿನ ಅದೃಷ್ಟಶಾಲಿ': ಚಿಯಾನ್ ವಿಕ್ರಮ್ ಭೇಟಿಯಾದ ಖುಷಿಯಲ್ಲಿ ರಿಷಬ್ ಶೆಟ್ಟಿ - Rishab on Chiyaan Vikram
ಈಗಾಗಲೇ ಅನಾವರಣಗೊಂಡಿರುವ ಮಿಷನ್ ಘಮ ಘಮ, ಪರಪಂಚ ಘಮ ಘಮ ಎಂಬ ಹಾಡುಗಳು, ಪೋಸ್ಟರ್, ಗ್ಲಿಂಪ್ಸ್ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದು ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ಈ ತಿಂಗಳಾಂತ್ಯ ತಿಳಿಯಲಿದೆ.