ಬಿಗ್ ಬಾಸ್ ಒಂಬತ್ತನೇ ವಾರದ ಆಟ ವಿಭಿನ್ನವಾಗಿ ಸಾಗಿದೆ. ಎಲಿಮಿನೇಶನ್ಗಾಗಿ ನಾಮಿನೇಷನ್ ಪ್ರಕ್ರಿಯೆಯೂ ಭಿನ್ನವಾಗಿದೆ. ಈ ಪ್ರಕ್ರಿಯೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಅವರು ಚೈತ್ರಾ ಕುಂದಾಪುರ ಅವರಿಗೆ ಟಾಂಗ್ ಕೊಟ್ಟಂತೆ ತೋರಿದೆ. ಇದರ ಒಂದು ಸುಳಿವು ಬಿಗ್ ಬಾಸ್ ಅನಾವರಣಗೊಳಿಸಿರುವ ಪ್ರೋಮೋದಲ್ಲಿ ಸಿಕ್ಕಿದೆ. ''ಚೈತ್ರಾ Vs ರಜತ್; ಸಿಂಪಲ್ಲಾಗೊಂದು 'ಬಾಸ್' ಸ್ಟೋರಿ! ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ'' ಎಂಬ ಕ್ಯಾಪ್ಷನ್ನೊಂದಿಗೆ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕಾತರ ಹೆಚ್ಚಾಗಿದೆ.
ಏನಿದು ಬಿಗ್ ಬಾಸ್ ಸಾಮಾಜ್ಯ?:ಬಿಗ್ ಬಾಸ್ ಮನೆಯೀಗ 'ಬಿಗ್ ಬಾಸ್ ಸಾಮಾಜ್ಯ'ವಾಗಿ ಮರುರೂಪುಗೊಂಡಿದೆ. ಇಲ್ಲಿನ ರಾಜನಾಗಿ ಉಗ್ರಂ ಮಂಜು ಅಧಿಕಾರ ನಡೆಸುತ್ತಿದ್ದಾರೆ. ಇದು ಬಿಗ್ ಬಾಸ್ ಕೊಟ್ಟಿರುವ ವಾರದ ಟಾಸ್ಕ್. ಕಠೋರವಾಗಿ, ವರಟನಾಗಿ ಅಧಿಕಾರ ನಡೆಸಬೇಕು, ಇತರ ಸ್ಪರ್ಧಿಗಳು ಪ್ರಜೆಗಳಾಗಿ ರಾಜನ ಆದೇಶ ಪಾಲಿಸಬೇಕೆಂಬುದು ಬಿಗ್ ಬಾಸ್ನ ನಿಮಯ. ಉಗ್ರಂ ಮಂಜು ಸಾರಥ್ಯದ ಮನೆಯಲ್ಲೀಗ ಎಲಿಮಿನೇಷನ್ಗೆ ನಡೆಯುವ ನಾಮಿನೇಷನ್ ಪ್ರಕ್ರಿಯೆ ಕೂಡಾ ಭಿನ್ನವಾಗಿ ಜರುಗುತ್ತಿದೆ. ಸ್ಪರ್ಧಿಗಳ ಆರೋಪ ಪ್ರತ್ಯಾರೋಪಗಳು, ಮನಸ್ತಾಪಗಳು ದೊಡ್ಡ ಮಟ್ಟದಲ್ಲೇ ಕಾಣ ಸಿಗುತ್ತಿದೆ.
ನಾಮಿನೇಶನ್ಗೆ ವಿಭಿನ್ನ ಆಟ - ಏನದು?:ನಾಮಿನೇಷನ್ ಪ್ರೊಸೆಸ್ನಲ್ಲಿ, ಪ್ರಜೆಗಳ ಅಂದರೆ ಸಹಸ್ಪರ್ಧಿಗಳ ಫೋಟೋವನ್ನು ಬಾಣಕ್ಕೆ ಚುಚ್ಚಿ ಆ ಬಾಣವನ್ನು ಬಿಡಬೇಕು ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ಅದರಂತೆ ಚೈತ್ರಾ ಕುಂದಾಪುರ ಅವರು ತಮ್ಮ ಕಾರಣಗಳನ್ನು ಒಗದಿಸಲು ಮುಂದಾಗಿದ್ದಾರೆ. ಸುರೇಶ್ ಅಣ್ಣ ಅವರನ್ನು ನಾಮಿನೇಟ್ ಮಾಡಲಿಚ್ಛಿಸುತ್ತೇನೆ, ಹರಾಜ್ ಪ್ರಕ್ರಿಯೆಯಲ್ಲಿ ಅವರ ತಂಡ ನನ್ನನ್ನು ತೆಗೆದುಕೊಂಡಿರೋದಿಲ್ಲ, ನನಗೆ ಬಹಳ ಬೇಜಾರ್ ಆಗಿದೆ ಎಂದು ತಿಳಿಸುತ್ತಿದ್ದಂತೆ, ರಾಜ ಮಂಜು ಇಡೀ ತಂಡವನ್ನು ನಾಮಿನೇಟ್ ಮಾಡುತ್ತಿದ್ದೀರೋ ಅಥವಾ ಸುರೇಶ್ ಅವರನ್ನು ನಾಮಿನೇಟ್ ಮಾಡುತ್ತಿದ್ದೀರೋ ಎಂದು ಪ್ರಶ್ನಿಸಿದ್ದಾರೆ. ನನ್ನ ಹಣ ಎತ್ತಲು ಐಶ್ವರ್ಯಾ ಮತ್ತು ಗೌತಮಿ ಅವರನ್ನು ಕರೆದುಕೊಂಡು ಬಂದ್ರು ಎಂದು ಚೈತ್ರಾ ತಿಳಿಸುತ್ತಿದ್ದಂತೆ ಈಗ ಅವರಿಬ್ಬರನ್ನು ನಾಮಿನೇಟ್ ಮಾಡ್ತೀರಾ ಎಂದು ಮತ್ತೆ ಮಂಜು ಪ್ರಶ್ನಿಸಿದ್ದಾರೆ.