ಲಂಡನ್: ಕೆನಡಿಯನ್ ನಟ ಡೊನಾಲ್ಡ್ ಸದರ್‌ಲ್ಯಾಂಡ್ (Donald Sutherland) ನಿಧನರಾಗಿದ್ದಾರೆ. ನಟನಿಗೆ 88 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಜನಪ್ರಿಯ ನಟನ ಸಾವಿನ ಸುದ್ದಿ ಕೇಳಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಜನಪ್ರಿಯ ಸೀರಿಸ್ 'ಎಂ.ಎ.ಎಸ್.ಹೆಚ್'ನಲ್ಲಿ ರೆಬೆಲ್ ಆರ್ಮಿ ಸರ್ಜನ್ ಹಾವ್ಕೆಯೆ ಪಿಯರ್ಸ್ ಪಾತ್ರದಲ್ಲಿ ಹೆಸರುವಾಸಿಯಾಗಿದ್ದರು. 'ದಿ ಡರ್ಟಿ ಡಜನ್'ನಲ್ಲಿ ಯುಸ್ ಜಿಐ ವೆರ್ನಾನ್ ಪಿಂಕ್ಲೆ ಪಾತ್ರದಿಂದಲೂ ಇವರು ಜನಪ್ರಿಯರು. ಅಲ್ಲದೇ, 'ಕೆಲ್ಲಿಸ್ ಹೀರೋಸ್'ನಲ್ಲಿ ಸಾರ್ಜೆಂಟ್ ಆಡ್‌ಬಾಲ್, ಆಲಿವರ್ ಸ್ಟೋನ್ ಅವರ 'ಜೆಎಫ್‌ಕೆ'ಯಲ್ಲಿ ಮಿಸ್ಟರ್ ಎಕ್ಸ್ ಮತ್ತು 'ದಿ ಹಂಗರ್ ಗೇಮ್ಸ್'ನಲ್ಲಿ ಪ್ರೆಸಿಡೆಂಟ್ ಸ್ಟೋನ್ನಮತಹ ಪಾತ್ರಗಳಿಂದ ಗುರುತಿಸಿಕೊಂಡಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ ಎಂದು ಡೊನಾಲ್ಡ್ ಸದರ್ಲ್ಯಾಂಡ್ ಪುತ್ರ - ನಟ ಕೀಫರ್ ಸದರ್ಲ್ಯಾಂಡ್ ಗುರುವಾರದಂದು ತಿಳಿಸಿದ್ದಾರೆ.
"ನನ್ನ ತಂದೆ ಡೊನಾಲ್ಡ್ ಸದರ್‌ಲ್ಯಾಂಡ್ ನಿಧನರಾಗಿದ್ದಾರೆ. ಚಲನಚಿತ್ರ ಇತಿಹಾಸದಲ್ಲಿ ಅತ್ಯಂತ ಪ್ರಮುಖ ನಟರಲ್ಲಿ ಒಬ್ಬರಾಗಿದ್ದರು ಎಂದು ಭಾವಿಸುತ್ತೇನೆ" ಎಂದು ನಟ ಕೀಫರ್ ಸದರ್ಲ್ಯಾಂಡ್ ತಿಳಿಸಿದ್ದಾರೆ ವರದಿಯಾಗಿದೆ. ಜೊತೆಗೆ, "ಪಾತ್ರಗಳಿಗೆ ಹೆದರಲಿಲ್ಲ. ಒಳ್ಳೆಯದು, ಕೆಟ್ಟದ್ದು ಅಥವಾ ಚೆನ್ನಾಗಿಲ್ಲ ಎಂದು ದೂರಲಿಲ್ಲ. ಅವರು ಕೆಲಸವನ್ನು ಪ್ರೀತಿಸಿದರು ಮತ್ತು ಅವರು ಇಷ್ಟಪಟ್ಟಿದ್ದನ್ನೇ ಮಾಡಿದರು. ಯಾರೂ ಅದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸುವುದಿಲ್ಲ. ಉತ್ತಮ ಜೀವನ ಸಾಗಿಸಿ ತೆರಳಿದ್ದಾರೆ" ಎಂದು ಮಗ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.