ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ನಟ ದುನಿಯಾ ವಿಜಯ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ 'ಭೀಮ' ಚಿತ್ರ ಆಗಸ್ಟ್ 9ರಂದು ಚಿತ್ರಮಂದಿರ ಪ್ರವೇಶಿಸಲಿದೆ.
ಕೋವಿಡ್ ಸಂದರ್ಭ ಸಿನಿಮಾ ಪ್ರದರ್ಶನ ಹಾಗೂ ಚಿತ್ರೀಕರಣ ಸ್ಥಗಿತಗೊಂಡಿತ್ತು. ನಂತರ, ಥಿಯೇಟರ್ಗಳಿಗೆ ಪ್ರೇಕ್ಷಕರು ಬರೋದು ಕಷ್ಟವಾಗಿತ್ತು. ಅಂಥಾ ಪರಿಸ್ಥಿತಿಯಲ್ಲಿ ನಟ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿ, ಅಭಿನಯಿಸಿದ 'ಸಲಗ' ಚಿತ್ರವನ್ನು ಬಿಡುಗಡೆ ಮಾಡಲಾಯ್ತು. 'ಸಲಗ' ಮಾಸ್ ಎಂಟರ್ಟೈನ್ ಚಿತ್ರವಾದ ಹಿನ್ನೆಲೆಯಲ್ಲಿ ಹಿಟ್ ಆಗಿ ದುನಿಯಾ ವಿಜಯ್ಗೆ ಯಶಸ್ವಿ ನಿರ್ದೇಶಕನ ಪಟ್ಟ ತಂದು ಕೊಟ್ಟಿತ್ತು. ಸದ್ಯ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲದೇ ಪ್ರೇಕ್ಷಕರು ಥಿಯೇಟರ್ಗಳಿಗೆ ಬರುತ್ತಿಲ್ಲ ಎಂಬ ಆರೋಪವಿದೆ. ಈ ಸಂದರ್ಭ ವಿಜಯ್ ನಟಿಸಿ, ನಿರ್ದೇಶನ ಮಾಡಿರೋ ಈ 'ಭೀಮ' ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಮಾಸ್ ಟೈಟಲ್ನಿಂದಲೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿರುವ 'ಭೀಮ' ಚಿತ್ರ ಟ್ರೇಲರ್ ಇಲ್ಲದೇ ಹಾಡುಗಳಿಂದ ಸದ್ದು ಮಾಡಿದೆ. ಬ್ಯಾಡ್ ಬಾಯ್ಸ್, ಐ ಲವ್ ಯೂ ಕಣೆ ಮತ್ತು ಡೋಂಟ್ ವರಿ ಬೇಬಿ ಚಿನ್ನಮ್ಮ ಹಾಡುಗಳ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ.
ಈ ಮಧ್ಯೆ ಬೂಮ್ ಬೂಮ್ ಬೆಂಗಳೂರು ಎಂಬ ಹಾಡು ಪಡ್ಡೆ ಹುಡುಗರ ಹಾಟ್ ಫೇವರೆಟ್ ಆಗಿದ್ದು, ಸಖತ್ ಟ್ರೆಂಡಿಂಗ್ನಲ್ಲಿದೆ. ಈ ಹಾಡಿನ್ನು ನಾಗರಹೊಳೆ ಸಮೀಪದ ಬುಡಕಟ್ಟು ತಂಡದ 30 ಸದಸ್ಯರು ಹಾಡಿರೋದು ವಿಶೇಷ. ಈ ಹಿನ್ನೆಲೆಯಲ್ಲಿ ಬುಡಕಟ್ಟು ಜನಾಂಗದ ಪ್ರತಿಭೆಗಳನ್ನು ಕರೆಸಿ ಮಾಧ್ಯಮದವರೆದುರು ಅವರ ಪ್ರತಿಭೆಯನ್ನು ಪ್ರದರ್ಶಿಸಲಾಯಿತು. ಭೀಮ ಚಿತ್ರದ ಹಾಡು ಹಾಗೂ ಅವರ ಬುಡಕಟ್ಟು ಜನಾಂಗದ ಹಾಡನ್ನು ಹಾಡುವ ಮೂಲಕ ಗಮನ ಸೆಳೆದರು. ಇವರ ಜೊತೆ ವಿಜಯ್ ಡ್ಯಾನ್ಸ್ ಮಾಡುವ ಮೂಲಕ ಈ ಪ್ರತಿಭೆಗಳಿಗೆ ಸಾಥ್ ನೀಡಿದರು.
ಈ ಸಂದರ್ಭ ಮಾತನಾಡಿದ ನಟ-ನಿರ್ದೇಶಕ ದುನಿಯಾ ವಿಜಯ್, ನಾನು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬ ಉದ್ದೇಶದಿಂದ ನಾಗರಹೊಳೆ ಸಮೀಪದ ಬುಡಕಟ್ಟು ಜನಾಂಗದವರ ಮನೆಗೆ ಹೋಗಿ ಅವರ ಕಷ್ಟಗಳನ್ನು ವಿಚಾರಿಸಿ ಅವರಿಗೆ ಅವಕಾಶ ನೀಡಿದ್ದೇನೆ ಎಂದು ತಿಳಿಸಿದರು.