'ಬಘೀರ', ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಚಂದನವನದ ಸ್ಟಾರ್ ಕಲಾವಿದರಾದ ಶ್ರೀಮುರಳಿ, ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯ ಸಿನಿಮಾ ವೀಕ್ಷಿಸಲು ಹೆಚ್ಚಿನ ಪ್ರೇಕ್ಷಕರು ಕಾತರರಾಗಿದ್ದಾರೆ. ಬಿಡುಗಡೆಗೆ ಎದುರು ನೋಡುತ್ತಿರುವ ಚಿತ್ರತಂಡದಿಂದ ಪ್ರಚಾರ ಶುರುವಾಗಿದೆ. ನಿನ್ನೆಯಷ್ಟೇ ತಂಡ ಸುಮಧುರ ಹಾಡೊಂದನ್ನು ಅನಾವರಣಗೊಳಿಸಿತ್ತು. ಇದೀಗ ಸೆನ್ಸಾರ್ ಪರೀಕ್ಷೆಯಲ್ಲೂ ಪಾಸಾಗಿದ್ದು, ಶುಭಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.
ರುಧೀರ ಧಾರಾ ಹಾಡಿನ ಬಳಿಕ ಬಘೀರ ಸಿನಿಮಾದಿಂದ ಎರಡನೇ ಹಾಡು ಶುಕ್ರವಾರದಂದು ಅನಾವರಣಗೊಂಡಿದೆ. "ಪರಿಚಯವಾದೆ..ಪರಿಚಯವಾದೆ.. ಪರಿ ಪರಿಯಾಗಿ ನನಗೆ" ಎಂಬ ಹಾಡು ಕಿವಿಗೆ ಇಂಪು ನೀಡುವಂತಿದೆ. ಅಷ್ಟೇ ಅಲ್ಲದೇ, ನಾಯಕ ಮತ್ತು ನಾಯಕಿಯ ಕೆಮಿಸ್ಟ್ರಿ ಈ ಹಾಡಿನಲ್ಲಿ ಸಖತ್ತಾಗೆ ವರ್ಕೌಟ್ ಆಗಿದೆ.
ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿರುವ ವಿಷಯವನ್ನು 'ಬಘೀರ'ನ ಹಿಂದಿರುವ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ. ತನ್ನ ವಿವಿಧ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪೋಸ್ಟರ್ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, '''ಲಾಕ್ಡ್ ಆನ್ ಟಾರ್ಗೆಟ್. ರೆಡಿ ಫಾರ್ ದಿ ಹಂಟ್.. ಬಘೀರ ಸೆನ್ಸಾರ್ ಪರೀಕ್ಷೆಯಲ್ಲಿ ಯು/ಎ ಪ್ರಮಾಣಪತ್ರ ಪಡೆದುಕೊಂಡಿದೆ. ಅಕ್ಟೋಬರ್ 31ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಆಗಲಿದೆ'' ಎಂದು ಬರೆದುಕೊಂಡಿದೆ.
ಇದನ್ನೂ ಓದಿ:'ಬಘೀರ'ನ 'ಪರಿಚಯವಾದೆ' ಸಾಂಗ್: ಶ್ರೀಮುರುಳಿ, ರುಕ್ಮಿಣಿ ವಸಂತ್ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ; ಮನಸೆಳೆಯುವಂತಿದೆ ಸಾಹಿತ್ಯ
ಇನ್ನು, ಕಳೆದ ದಿನ ಅನಾವರಣಗೊಂಡಿರುವ ಇಂಪಾದ ಹಾಡಿನಲ್ಲಿ ನಾಯಕ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ನಾಯಕ ನಟಿ ರುಕ್ಮಿಣಿ ವಸಂತ್ ಇಬ್ಬರೂ ಅಷ್ಟೇ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಖಡಕ್ ಪೊಲೀಸ್ ಪಾತ್ರದಲ್ಲಿ ಶ್ರೀಮುರಳಿ ಎದುರಾದರೆ, ವೈದ್ಯೆಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಇಬ್ಬರದ್ದೂ ಒಂದು ಪ್ರಬುದ್ಧ ಪ್ರೇಮ್ಕಹಾನಿ ಎಂಬ ಸುಳಿವನ್ನು ಪರಿಚಯವಾದೆ ಹಾಡು ಬಿಟ್ಟುಕೊಟ್ಟಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಹಾಡಿಗೆ ಪ್ರಮೋದ್ ಮರವಂತೆ ಅವರ ಹೃದಯಸ್ಪರ್ಶಿ ಸಾಹಿತ್ಯವಿದೆ. ರಿತೇಷ್ ಜಿ ರಾವ್ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ವಿಜಯ್ ಕಿರಗಂದೂರು ಅವರು ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ:ಅಡ್ಡಗಟ್ಟಿದ ಫೋಟೋಗ್ರಾಫರ್ಗಳ ಮೇಲೆ ಕೋಪಗೊಂಡ ರಣ್ಬೀರ್ ಕಪೂರ್, ಆಲಿಯಾ ಭಟ್: ವಿಡಿಯೋ
ಈಗಾಗಲೇ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿರುವ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಿರ್ದೇಶಕ ಪ್ರಶಾಂತ್ ನೀಲ್ ಈ ಬಹುನಿರೀಕ್ಷಿತ ಚಿತ್ರಕ್ಕೆ ಕಥೆ ಒದಗಿಸಿದ್ದಾರೆ. ಡಾ.ಸೂರಿ ಈ ಸಿನಿಮಾಗೆ ನಿರ್ದೇಶನದ ಜತೆಗೆ ಚಿತ್ರಕಥೆ ಮತ್ತು ಸಂಭಾಷಣೆ ಪೂರೈಸಿದ್ದಾರೆ. ಎ.ಜೆ ಶೆಟ್ಟಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಚೇತನ್ ಡಿಸೋಜಾ ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯ ಸೆನ್ಸಾರ್ ಪರೀಕ್ಷೆಯಲ್ಲಿ ಯು/ಎ ಪ್ರಮಾಣಪತ್ರ ಪಡೆದುಕೊಂಡಿರುವ ಈ ಚಿತ್ರ ಗುರುವಾರ ಚಿತ್ರಮಂದಿರ ಪ್ರವೇಶಿಸಲಿದೆ.