ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ಕಲರ್ಸ್ ಕನ್ನಡ ವಾಹಿನಿ ಇದೀಗ 'ನನ್ನ ದೇವ್ರು' ಎಂಬ ಹೊಸ ಕಥೆಯನ್ನು ಹೊತ್ತು ತಂದಿದೆ. ಈ ಮೂಲಕ ನಟಿ ಮಯೂರಿ ಬಹಳ ವರ್ಷಗಳ ನಂತರ ಕಿರುತೆರೆಗೆ ಮರಳಿದ್ದಾರೆ.
ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ ನರ್ಸ್ ಪಾತ್ರ. ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ಹುಡುಗಿಯೇ ಮಯೂರಿ. ಜನಾನುರಾಗಿ ಸಚ್ಚಿದಾನಂದನ ಇಪ್ಪತ್ತು ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಹಂಬಲಿಸುತ್ತಿರುವ ಸಚ್ಚಿದಾನಂದನ ಬದುಕಲ್ಲಿ ಮಯೂರಿಯ ಪ್ರವೇಶವಾಗುತ್ತದೆ. ತಾನು ಆರಾಧಿಸುವ ಸಚ್ಚಿದಾನಂದ ಅವರ ಬಾಳನ್ನು ಸರಿದಾರಿಗೆ ತರುವ ಹಾದಿಯಲ್ಲಿ ಮಯೂರಿ ಎದುರಿಸುವ ಸವಾಲುಗಳೇನು ಎಂಬುದೇ ಮುಂದಿನ ಕತೆ. ಸುತ್ತಲಿನವರ ಸಂಚುಗಳಿಂದ ಮಯೂರಿ ಹೇಗೆ ಸಚ್ಚಿದಾನಂದನನ್ನು ಕಾಪಾಡುತ್ತಾಳೆ ಎಂಬುದು ಕುತೂಹಲ.
ಅಶ್ವಿನಿ ನಕ್ಷತ್ರ ಎಂಬ ಜನಪ್ರಿಯ ಧಾರಾವಾಹಿ ಮೂಲಕ ಹೆಸರಾದ ಮಯೂರಿ ಬಹಳ ವರ್ಷಗಳ ನಂತರ ಟಿವಿಗೆ ಮರಳಿದ್ದು, 'ನನ್ನ ದೇವ್ರು' ಧಾರಾವಾಹಿಯಲ್ಲಿ ನಾಯಕಿಯಾಗಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಅವಿನಾಶ್ ದಿವಾಕರ್ ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಅನ್ನುವುದು ಇನ್ನೊಂದು ವಿಶೇಷ. ಇವರೊಟ್ಟಿಗೆ ಯುಕ್ತಾ ಮಲ್ನಾಡ್, ಸ್ವಾತಿ, ವಿ.ಮನೋಹರ್, ರೇಖಾದಾಸ್, ನಿಶ್ಚಿತಾ ಗೌಡ, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ರವಿ ಬ್ರಹ್ಮ, ಅಭಿಷೇಕ್ ಶ್ರೀಕಾಂತ್ ಹೀಗೆ 'ನನ್ನ ದೇವ್ರು' ತಾರಾಗಣದಲ್ಲಿ ಜನಪ್ರಿಯ ನಟ ನಟಿಯರಿದ್ದಾರೆ. ಈ ಮೊದಲು 'ಒಲವಿನ ನಿಲ್ದಾಣ' ಧಾರಾವಾಹಿಯನ್ನು ನಿರ್ಮಿಸಿದ್ದ ಶ್ರುತಿ ನಾಯ್ಡು, ನನ್ನ ದೇವ್ರು ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಬೆಳ್ಳಿ ತೆರೆಯ ಮೇಲೆ ಖಳನಟನಾಗಿ ಗಮನ ಸೆಳೆದಿರುವ ರಮೇಶ್ ಇಂದಿರಾ ನನ್ನ ದೇವ್ರು ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.