ಎರಡು ದಿನಗಳ ಹಿಂದೆ (ನವೆಂಬರ್ 19) ಸಂಗೀತ ದಿಗ್ಗಜ ಎ. ಆರ್ ರೆಹಮಾನ್ ಮತ್ತು ಸೈರಾ ಬಾನು ದಂಪತಿ 29 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ಸ್ಟಾಪ್ ಇಡುತ್ತಿರುವುದಾಗಿ ಘೋಷಿಸಿದರು. ಅವರ ಅನೌನ್ಸ್ಮೆಂಟ್ ಬೆನ್ನಲ್ಲೇ, ರೆಹಮಾನ್ ಅವರ ಬಾಸ್ ವಾದಕರಾದ ಮೋಹಿನಿ ಡೇ ಕೂಡಾ ಪತಿ ಮಾರ್ಕ್ ಹರ್ಟ್ಸಚ್ನಿಂದ ಬೇರೆಯಾಗುತ್ತಿರುವುದಾಗಿ ಅನೌನ್ಸ್ ಮಾಡಿದ್ರು. ಇವರು ಎ.ಆರ್ ರೆಹಮಾನ್ ಜೊತೆ ವಿಶ್ವದಾದ್ಯಂತ 40ಕ್ಕೂ ಹೆಚ್ಚು ಶೋಗಳಲ್ಲಿ ಭಾಗಿಯಾಗಿದ್ದಾರೆ. ಇಬ್ಬರ ವಿಚ್ಛೇದನ ಒಂದೇ ಸಮಯ ಘೋಷಣೆಯಾದ ಹಿನ್ನೆಲೆ, ಏನಾದ್ರು ಲಿಂಕ್ ಇದೆಯಾ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು.
ಇದೀಗ, ರೆಹಮಾನ್ ಅವರ ವಕೀಲರಾದ ವಂದನಾ ಶಾ ಅವರು ಈ ಊಹಾಪೋಹಗಳನ್ನು ನಿರಾಕರಿಸಿದ್ದಾರೆ. ರೆಹಮಾನ್ ಮತ್ತು ಮೋಹಿನಿ ತಮ್ಮ ವಿಚ್ಛೇದನಗಳನ್ನು ಕೆಲವೇ ಗಂಟೆಗಳ ಅಂತರದಲ್ಲಿ ಘೋಷಿಸಿದ ಹಿನ್ನೆಲೆ, ಇಬ್ಬರ ಸಂಬಂಧದ ಸುತ್ತ ಊಹಾಪೋಹಗಳು ಎದ್ದಿದ್ದವು.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ, "ಈ ವಿಚ್ಛೇದನಗಳ ನಡುವೆ ಯಾವುದೇ ಕನೆಕ್ಷನ್ ಇಲ್ಲ. ಸೈರಾ ಮತ್ತು ರೆಹಮಾನ್ ಪರಸ್ಪರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ರೆಹಮಾನ್ ಮತ್ತು ಸೈರಾ ಇಬ್ಬರೂ ಅಗಾಧವಾಗಿ ಯೋಚಿಸಿದ ನಂತರವೇ ನಿರ್ಧಾರ ಕೈಗೊಂಡಿದ್ದಾರೆಂದು ವಕೀಲೆ ವಂದನಾ ಶಾ ಒತ್ತಿ ಹೇಳಿದರು.
ದಂಪತಿಯ ಪ್ರತ್ಯೇಕತೆಯು ಭಾವನಾತ್ಮಕ ಸವಾಲುಗಳನ್ನು ಆಧರಿಸಿದೆ. ಡಿವೋರ್ಸ್ಗೆ ಸಂಬಂಧಿಸಿದಂತೆ ಹಣಕಾಸಿನ ವಿಷಯಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ವಕೀಲರು ತಿಳಿಸಿದ್ದಾರೆ. ಈ ಸವಾಲಿನ ಸಮಯದಲ್ಲಿ ರೆಹಮಾನ್ ಮತ್ತು ಸೈರಾ ಇಬ್ಬರ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದರು.